
ಬೀದರ್: ನಗರದಲ್ಲಿ ಅಕ್ರಮವಾಗಿ ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಸುತ್ತಿದ್ದ ಜಾಲವನ್ನು ಭೇದಿಸಿರುವ ಗಾಂಧಿಗಂಜ್ ಹಾಗೂ ನೂತನ ನಗರ ಠಾಣೆ ಪೊಲೀಸರು, 12 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎಂಟು ಜನ ಆರೋಪಿಗಳನ್ನು ವಶಕ್ಕೆ ಪಡೆದು, ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರನ್ನು ತೆಲಂಗಾಣದ ತನ್ವಿರ್, ಬೀದರ್ನ ರಿಜ್ವಾನ್, ತನ್ನೀರ್ ಶೇರಿಕಾರ್, ಮಣಿಪುರದ ಥೋಂಬಲ್ ಮೌಜಿಂಗ್ನ ಯಾಸೀನ್, ಬಿಶೇನಪುರ ಕೊಕ್ಕಾದ ಮುಹಮ್ಮದ್ ಸಿರಾಜ್ ಖಾನ್, ಮುಹಮ್ಮದ್ ಷರೀಫ್ ಖಾನ್, ಮುಹಮ್ಮದ್ ರೋಹಿತ್ ಖಾನ್ ಹಾಗೂ ಇಂಫಾಲ್ ನಹರೂಪ್ ಪಂಗೂನ್ನ ಮುಹಮ್ಮದ್ ಅನಸ್ ಎಂದು ಗುರುತಿಸಲಾಗಿದೆ. ಈ ಜಾಲದಲ್ಲಿದ್ದ ಮಣಿಪುರದ ಇಬ್ಬರು ಹಾಗೂ ಬೀದರ್ನ ಒಬ್ಬ ಕಾರ್ಮಿಕನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬಂಧಿತ ಆರೋಪಿಗಳು ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಸುತ್ತಿದ್ದರು ಎಂದು ತಿಳಿಸಿದರು. ತಯಾರಾದ ವಸ್ತುಗಳನ್ನು ನಗರದ ಚಿದ್ರಿ ಬುತ್ತಿ ಬಸವಣ್ಣ ದೇವಸ್ಥಾನದ ಸಮೀಪದ ಮುಖ್ಯ ಆರೋಪಿ ತನ್ನೀರ್ನ ಮನೆಯಲ್ಲಿ ಸಂಗ್ರಹಿಸಿ, ಅಲ್ಲಿಂದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು. ತೆರಿಗೆ ವಂಚಿಸಲು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದರು.
ಕಾರ್ಯಾಚರಣೆ ಮತ್ತು ಜಪ್ತಿ
ನಮ್ಮ ಇಂಟೆಲಿಜೆನ್ಸ್ ವಿಭಾಗದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಚಿದ್ರಿಯ ಮನೆ ಹಾಗೂ ಕೊಳಾರ ಕೈಗಾರಿಕಾ ಪ್ರದೇಶದ ಎರಡು ಗೋದಾಮುಗಳ ಮೇಲೆ ದಾಳಿ ನಡೆಸಿ, ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು, ರಾಸಾಯನಿಕಗಳು, ಹಾಗೂ ಎಎಎ, 5ಹೆಚ್ಕೆ, ಜೋಕರ್, ಎಸ್ಐಕೆ ಹೆಸರಿನ ಪಾನ್ ಮಸಾಲಾ ಪ್ಯಾಕೆಟ್ಗಳನ್ನು ಜಪ್ತಿ ಮಾಡಿದ್ದಾರೆ.
ಚಿದ್ರಿಯ ಮನೆಯಿಂದ ₹71.76 ಕೋಟಿ ಮೌಲ್ಯದ ಗುಟ್ಕಾ, ಪಾನ್ ಮಸಾಲ ಹಾಗೂ ಕೊಳಾರ ಕೈಗಾರಿಕಾ ಪ್ರದೇಶದ ಗೋದಾಮುಗಳಿಂದ ₹43.30 ಲಕ್ಷ ಮೌಲ್ಯದ ಕಚ್ಚಾ ವಸ್ತು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದರು.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರು ಮತ್ತು ಇತರ ಇಲಾಖಾ ಅಧಿಕಾರಿಗಳನ್ನು ವರಿಷ್ಠಾಧಿಕಾರಿಗಳು ಅಭಿನಂದಿಸಿದರು. ಉತ್ತಮ ಕೆಲಸ ಮಾಡಿದ ಎಲ್ಲರಿಗೂ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡುವುದಾಗಿ ಘೋಷಿಸಿದರು.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಎಂ.ಡಿ. ಸನದಿ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಖಾಜಾ ಖಲೀಲುಲ್ಲಾ, ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿ ಸಂತೋಷ್ ಕಾಳೆ, ಮನೋಹರ್ ಅಲಶೆಟ್ಟಿ, ಗಾಂಧಿಗಂಜ್ ಠಾಣೆಯ ಪಿಐ ಆನಂದರಾವ್ ಎಸ್.ಎನ್., ಸೆನ್ ಪೊಲೀಸ್ ಠಾಣೆ ಪಿಐ ಶಿವಾನಂದ ಘಾಣಿಗೇರ್, ಗಾಂಧಿಗಂಜ್ ಠಾಣೆಯ ಪಿಎಸ್ಐ ದಶರಥ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ್, ಡಿಎಸ್ಬಿ ಘಟಕದ ಹೆಡ್ ಕಾನ್ಸ್ಟೆಬಲ್ ಸಂತೋಷ್, ಚಿಂತಾಕಿ ಠಾಣೆಯ ಸಂತೋಷ್, ಅನಿಲ್, ಗಂಗಾಧರ, ಸುಧೀರ, ಅಜಯ್ ಸಿಂಗ್, ರಾಜಕುಮಾರ, ಇಸ್ಮಾಯಿಲ್, ರಾಜಕಿರಣ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

