ಕಿತ್ತೂರು ಚೆನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ: ₹ 200ರ ಸ್ಮಾರಕ ನಾಣ್ಯ ಬಿಡುಗಡೆ

Spread the love

ನವದೆಹಲಿ: ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ೨೦೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನವದೆಹಲಿಯ ಸಿರಿ ಪೋರ್ಟ್ ಸಭಾಂಗಣದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ದೆಹಲಿ ಕನ್ನಡ ಸಂಘದ ಸಹಯೋಗದಲ್ಲಿ ಭವ್ಯ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ೨೦೦ ರೂಪಾಯಿಯ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದರು.

​ಈ ಸ್ಮಾರಕ ನಾಣ್ಯ ಬಿಡುಗಡೆ ಕಾರ್ಯಕ್ರಮವು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿ ಅವರ ದಿವ್ಯಸಾನಿದ್ಯದಲ್ಲಿ ನೆರವೇರಿತು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿತ್ತೂರು ವಿಜಯ ಪ್ರೇರಣೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಕಿತ್ತೂರಿನ ರಾಣಿ ಚೆನ್ನಮ್ಮ ಅವರು ತಮ್ಮ ರಾಜ್ಯದ ಸಣ್ಣ ಸೈನ್ಯವನ್ನು ಕಟ್ಟಿಕೊಂಡು ಬ್ರಿಟಿಷ್ ಸೈನಿಕರನ್ನು ಪರಾಭವಗೊಳಿಸಿದ್ದು ಐತಿಹಾಸಿಕ ವಿಜಯವಾಗಿದೆ. ಅವರು ಆಳಿದ ಕಿತ್ತೂರಿನಲ್ಲಿ ೧೮೨೪ರಲ್ಲಿ ಪಡೆದ ವಿಜಯವು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಾರಂಭಕ್ಕೆ ಒಂದು ದೊಡ್ಡ ಸ್ಫೂರ್ತಿಯಾಗಿತ್ತು ಎಂದು ಸ್ಮರಿಸಿದರು.

​ದೆಹಲಿಯಲ್ಲಿ ರಾಣಿ ಚೆನ್ನಮ್ಮ ಅವರ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರೆತು, ಈ ಕಾರ್ಯಕ್ರಮದ ಮೂಲಕ ಕರ್ನಾಟಕದ ಸಂಸ್ಕೃತಿಯ ಸೊಬಗಿನ ಸಾಕ್ಷಾತ್ಕಾರವಾಯಿತು. ಈ ವೇಳೆ ಕಿತ್ತೂರು ಚೆನ್ನಮ್ಮ ಅವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಒಂದು ಪ್ರದರ್ಶನವನ್ನು ಸಹ ಉದ್ಘಾಟಿಸಲಾಯಿತು.

​ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ನಾರಾಯಣರಾವ್ ಬಾಂಡಗೆ ಮತ್ತು ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು. ಈ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪಾತ್ರವನ್ನು ಮತ್ತೊಮ್ಮೆ ಸ್ಮರಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *