ಲಂಚ ಆರೋಪ: ಬಂಟ್ವಾಳ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಮೂವರ ಬಂಧನ

Spread the love

ಲಂಚ ಆರೋಪ: ಬಂಟ್ವಾಳ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಮೂವರ ಬಂಧನ

ಬಂಟ್ವಾಳ: ಜಮೀನಿನ ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬಂಟ್ವಾಳ ತಾಲೂಕು ಕಚೇರಿಗೆ ದಿಢೀರ್ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ, ಕೇಸ್ ವರ್ಕರ್ ಸಂತೋಷ್ ಮತ್ತು ದಲ್ಲಾಳಿ ಗಣೇಶ್ ವಾಮದಪದವು ಎಂದು ಗುರುತಿಸಲಾಗಿದೆ.
ಈ ಹಿಂದೆ ಸಜಿಪಮನ್ನೂರು ಗ್ರಾಮದ ಒಬ್ಬ ದೂರುದಾರರು ತಮ್ಮ ತಾಯಿಯ ಪೌತಿ ಖಾತೆ ದಾಖಲಿಸಲು 2021ರಲ್ಲಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ನ್ಯಾಯಾಲಯಗಳು ಜಮೀನು ಮಂಜೂರಾತಿಗೆ ಆದೇಶ ನೀಡಿದ್ದರೂ, ಕಡತವು ಕಚೇರಿಯಲ್ಲಿ ಬಾಕಿ ಉಳಿದಿತ್ತು. ಅರ್ಜಿದಾರರು ಈ ಬಗ್ಗೆ ವಿಚಾರಿಸಿದಾಗ, ಕೇಸ್ ವರ್ಕರ್ ಸಂತೋಷ್ ₹71,500 ಮತ್ತು ಉಪ ತಹಶೀಲ್ದಾರ್ ರಾಜೇಶ್ ನಾಯ್ಕ ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಲೋಕಾಯುಕ್ತ ಕಾರ್ಯಾಚರಣೆ
ಈ ಕುರಿತು ಸಾಕ್ಷಿ ಸಹಿತ ದೂರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಸಲ್ಲಿಕೆಯಾದ ನಂತರ, ಎಸ್.ಪಿ. ಕುಮಾರಚಂದ್ರ ನೇತೃತ್ವದಲ್ಲಿ ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿದೆ. ದಲ್ಲಾಳಿ ಗಣೇಶ್ ಮೂಲಕ ₹20,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ, ಉಪ ತಹಶೀಲ್ದಾರ್ ರಾಜೇಶ್ ನಾಯ್ಕ ಅವರು ಈ ಹಣವನ್ನು ತಹಶೀಲ್ದಾರ್‌ಗೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ. ಹೀಗಾಗಿ, ತಹಶೀಲ್ದಾರ್ ಅವರ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಎಸ್.ಪಿ. ಕುಮಾರಚಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಲಂಚ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮೂವರು ಆರೋಪಿಗಳು ಲೋಕಾಯುಕ್ತ ಪೊಲೀಸರ ವಶದಲ್ಲಿದ್ದಾರೆ.

Leave a Reply

Your email address will not be published. Required fields are marked *