
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಅವರಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ₹1,102 ಕೋಟಿ ದಂಡ ವಿಧಿಸಿದೆ. ಸುಮಾರು 127 ಕೆಜಿ ಚಿನ್ನ ಅಕ್ರಮವಾಗಿ ಸಾಗಣೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ರನ್ಯಾ ರಾವ್ ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಉದ್ಯಮಿ ತರುಣ್ ಕೊಂಡರಾಜು, ಆಭರಣ ವ್ಯಾಪಾರಿಗಳಾದ ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಡಿಆರ್‌ಐ ಬಂಧಿಸಿತ್ತು. ಸದ್ಯ ನಾಲ್ವರೂ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಚಿನ್ನ ಕಳ್ಳಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ರನ್ಯಾ ರಾವ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಫೋಸಾ) ಅಡಿ ಪ್ರಕರಣ ದಾಖಲಿಸಲಾಗಿದೆ. ₹1,102 ಕೋಟಿ ದಂಡ ಪಾವತಿಸುವಂತೆ ಡಿಆರ್‌ಐ ನೋಟಿಸ್‌ನಲ್ಲಿ ಸೂಚಿಸಿದೆ.
ಇತರ ಆರೋಪಿಗಳಿಗೂ ದಂಡ
ಡಿಆರ್‌ಐ ಮುಂಬೈ ವಿಭಾಗದ ಅಧಿಕಾರಿಗಳು ಮಂಗಳವಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ನಾಲ್ವರು ಅಪರಾಧಿಗಳಿಗೂ ನೋಟಿಸ್ ನೀಡಿದ್ದಾರೆ. ತರುಣ್ ಕೊಂಡರಾಜು ಅವರಿಗೆ 67 ಕೆಜಿ 600 ಗ್ರಾಂ ಚಿನ್ನ ಕಳ್ಳಸಾಗಣೆಗಾಗಿ ₹62 ಕೋಟಿ ದಂಡ ವಿಧಿಸಲಾಗಿದೆ. ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರಿಗೆ 63 ಕೆಜಿ ಚಿನ್ನ ಕಳ್ಳಸಾಗಣೆಗಾಗಿ ತಲಾ ₹53 ಕೋಟಿ ದಂಡ ವಿಧಿಸಲಾಗಿದೆ.
ಕಳ್ಳಸಾಗಣೆ ಮಾಡಿದ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಆಮದು ತೆರಿಗೆಯ ಮೊತ್ತವನ್ನು ಒಳಗೊಂಡು ಈ ದಂಡ ವಿಧಿಸಲಾಗಿದೆ.
ಆರೋಪಿಗಳು ದಂಡ ಪಾವತಿಸಿದರೂ ಅವರ ವಿರುದ್ಧದ ಅಪರಾಧ ಪ್ರಕರಣ ರದ್ದಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಮಾರು ₹15 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿತ್ತು. ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ತಪಾಸಣೆಗೊಳಪಡಿಸಿದಾಗ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಬಂಧಿಸಲಾಗಿತ್ತು.

