
ಧಾರವಾಡ: “ಒಬ್ಬ ಕವಿ ಕಾಲಾನಂತರದಲ್ಲಿಯೂ ಇಂದಿನ ಯುವಕರು ಕಥೆ, ಕಾವ್ಯಗಳನ್ನು ಕಟ್ಟುವ ರೀತಿಯಲ್ಲಿ ಬದುಕಿದ್ದರು. ಅವರ ಎಲ್ಲ ಪ್ರಸಂಗಗಳು ಮಾನವೀಯ ನೆಲೆಯೊಳಗೆ ನೆಲೆಸಿರುವಂತವುಗಳು. ಬದುಕಿನ ಮೌಲ್ಯಗಳನ್ನು ಗಾಢವಾಗಿ ತಮ್ಮ ಸಾಹಿತ್ಯದ ಮೂಲಕ ತೋರಿಸಿದವರು ದ.ರಾ.ಬೇಂದ್ರೆಯವರು,” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.
ಅವರು ಮಂಗಳವಾರದಂದು ರಂದು ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ, ಧಾರವಾಡ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ವರಕವಿ ಡಾ. ದ.ರಾ. ಬೇಂದ್ರೆಯವರ 44ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬೇಂದ್ರೆಯವರು ಮತ್ತು ಬಸವರಾಜ ಕಟ್ಟೀಮನಿಯವರ ಒಡನಾಟವನ್ನು ಸ್ಮರಿಸಿದ ಅವರು, “ಬೇಂದ್ರೆಯವರ ಸಾಹಿತ್ಯವನ್ನು ಸ್ಪರ್ಶಿಸುವುದು, ಅವರ ಕಾವ್ಯವನ್ನು ಅರ್ಥಮಾಡಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಅದು ಆಳವಾದ ಮನಸ್ಸಿನ ಒಳನೋಟವನ್ನು ಅಗತ್ಯಪಡಿಸುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಅವರು ಮಾತನಾಡಿ, “ಬೇಂದ್ರೆಯವರು ತಮ್ಮ ಅಜ್ಜಿ ಗೋಧುಬಾಯಿ ಮತ್ತು ತಾಯಿ ಅಂಬವ್ವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಅವರು ಹೆಂಡತಿಯನ್ನು ಸಖೀಯೆಂದು ನೋಡಿದವರು. ತಾಯಿಯ ಹೆಸರನ್ನು ಒಳಗೊಂಡು ತಮ್ಮ ಕಾವ್ಯನಾಮವನ್ನು ‘ಅಂಬಿಕಾತನಯದತ್ತ’ ಎಂದು ಇಟ್ಟಿರುವುದು ಅವರ ಸ್ತ್ರೀಪರ ವಿಶಿಷ್ಟ ನೋಟವನ್ನು ತೋರಿಸುತ್ತದೆ. ಇಂದಿನ ಮಕ್ಕಳು ಬೇಂದ್ರೆಯವರ ಕಾವ್ಯದ ಸೊಗಡನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿ, “44 ವರ್ಷಗಳ ಹಿಂದೆ ದೀಪಾವಳಿಯ ನರಕ ಚತುರ್ದಶಿಯ ದಿನವೇ ದ.ರಾ. ಬೇಂದ್ರೆಯವರು ಅಸ್ತಂಗತರಾದರು. ಆ ಕ್ಷಣದಲ್ಲಿ ಇಡೀ ಕನ್ನಡ ಸಾಹಿತ್ಯ ಲೋಕವೇ ಕತ್ತಲೆಯೊಳಗಾಯಿತು. ಆದರೆ, ಅವರ ಸಾಹಿತ್ಯ ಇಂದಿಗೂ ಓದುಗರ ಹೃದಯಗಳಲ್ಲಿ ಜೀವಂತವಾಗಿದೆ. ಬೇಂದ್ರೆಯವರ ಕಾವ್ಯವು ನವನವೀನತೆಯ ಸಂಕೇತ. ಎಷ್ಟು ಸಲ ಓದಿದರೂ ಹೊಸ ಅರ್ಥಗಳು ಸಿಗುತ್ತವೆ. ಕರ್ನಾಟಕ ಸರ್ಕಾರವು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಮತ್ತು ಅವರ ಜನ್ಮದಿನ ಜನವರಿ 31 ಅನ್ನು ‘ಕವಿ ದಿನ’ ಎಂದು ಘೋಷಿಸಬೇಕು,” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡದ ಗಾಯಕಿ ವಿದುಷಿ ರಾಧಾ ದೇಸಾಯಿ ಮತ್ತು ಅವರ ವೃಂದದವರು ಬೇಂದ್ರೆಯವರ ಗೀತೆಗಳ ಗಾಯನ ಪ್ರಸ್ತುತಪಡಿಸಿದರು. ಅಪೂರ್ವಾ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯ ಡಾ. ಶಿಲಾಧರ ಮುಗಳಿ ಉಪಸ್ಥಿತರಿದ್ದರು. ಹಾಗು ಡಾ. ಅಶೋಕ ಶೆಟ್ಟರ, ಡಾ. ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಹಾಗೂ ಪ್ರಭು ಕುಂದರಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

