
ಬೆಳ್ತಂಗಡಿ: ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದು, ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ್ದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ, ಇದೀಗ ತನಿಖಾಧಿಕಾರಿಗಳ ಮುಂದೆ ತನ್ನ ಬಣ್ಣ ಬಯಲು ಮಾಡಿದ್ದಾನೆ. ಕೇವಲ ಹಣದ ಆಸೆಗಾಗಿ, ಕೆಲವು ದುಷ್ಟ ಶಕ್ತಿಗಳ ಕೈಗೊಂಬೆಯಾಗಿ ಈ ಪವಿತ್ರ ಕ್ಷೇತ್ರಕ್ಕೆ ಮಾಡಿದ ಅಪಮಾನದ ಸತ್ಯವನ್ನು ಒಪ್ಪಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿಯವರೆಗೆ ತಾನು ಹೂತುಹಾಕಿದ ಶವಗಳ ಬಗ್ಗೆ ಸುಳ್ಳು ಕಥೆಗಳನ್ನು ಹೇಳಿ ಪೊಲೀಸ್ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದ ಚಿನ್ನಯ್ಯ, ಇದೀಗ ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದೆ ಮಂಡಿಯೂರಿದ್ದಾನೆ. ಆತನ ಅಣ್ಣ ತಾನಾಸಿಯವರ ಮುಂದೆ ಕೂಡ ತನ್ನ ಸುಳ್ಳು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯ ತನಿಖೆಗಾಗಿ ಎಸ್‌ಐಟಿ ತಂಡ ತಮಿಳುನಾಡಿನ ಆತನ ಹುಟ್ಟೂರು ಚಿಕ್ಕರಸಂಪಾಳ್ಯ ಮತ್ತು ಮಂಡ್ಯಕ್ಕೆ ತೆರಳಿ ಸತ್ಯವನ್ನು ಕಲೆಹಾಕುತ್ತಿದೆ.
ಸಾವಿರಾರು ಹೆಣ ಹೂತದ್ದು ಸುಳ್ಳು: ಚಿನ್ನಯ್ಯ
ಚಿನ್ನಯ್ಯ ನೀಡಿದ ಹೇಳಿಕೆಯ ಪ್ರಕಾರ, ಆತ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ಕೆಲವು ಶವಗಳನ್ನು ಪೊಲೀಸ್ ಪ್ರಕ್ರಿಯೆ ನಂತರ ಹೂತು ಹಾಕಿದ್ದು ನಿಜ. ಆದರೆ, “ಸಾವಿರಾರು ಹೆಣಗಳನ್ನು ಹೂತಿದ್ದೇನೆ ಎಂಬುದು ಸಂಪೂರ್ಣ ಸುಳ್ಳು” ಎಂದು ಆತ ಒಪ್ಪಿಕೊಂಡಿದ್ದಾನೆ. “ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ನಾನು ಬುರುಡೆ ಗ್ಯಾಂಗ್ ಅನ್ನು ನಂಬಿ ಮೋಸಹೋದೆ. ಅವರು ಹೇಳಿದಂತೆ ನಾನು ಮಾಡಿದ್ದೇನೆ” ಎಂದು ಚಿನ್ನಯ್ಯ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರಿಗೆ ತಾನು ನೀಡಿದ ಬುರುಡೆ ಎಲ್ಲಿಯದ್ದು ಎಂಬುದು ತನಗೆ ಗೊತ್ತಿಲ್ಲ. ಅದು ಪಿತೂರಿ ನಡೆಸಿದವರು ಕೊಟ್ಟಿದ್ದು ಎಂದು ಆತ ಹೇಳಿದ್ದಾನೆ. “ಶವ ಶೋಧದ ವೇಳೆ ಅಸ್ಥಿ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ ಪಾಯಿಂಟ್ 6ರಲ್ಲಿ ತಲೆಬುರುಡೆ ಸಿಕ್ಕಿದಾಗ ನಾನು ಗಾಬರಿಗೊಂಡೆ. ಅಂದೇ ಸತ್ಯ ಹೇಳಲು ತೀರ್ಮಾನಿಸಿದೆ” ಎಂದು ಆತ ತಿಳಿಸಿದ್ದಾನೆ.
ಕಣ್ಣೀರು ಹಾಕುತ್ತಿರುವ ಚಿನ್ನಯ್ಯ, 12 ಜನರ ಹೆಸರು ಬಹಿರಂಗ?
ಹಣದ ಆಸೆಗೆ ಇಡೀ ಸಮಾಜದಲ್ಲಿ ಧರ್ಮಸ್ಥಳದ ಬಗ್ಗೆ ತಪ್ಪು ಸಂದೇಶ ರವಾನಿಸಲು ಕಾರಣನಾದ ಚಿನ್ನಯ್ಯ, ಇದೀಗ ಪೊಲೀಸರ ಮುಂದೆ “ದಯವಿಟ್ಟು ನನ್ನನ್ನು ಈ ಪ್ರಕರಣದಿಂದ ಪಾರುಮಾಡಿ, ಕೋರ್ಟಿಗೆ ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಸತ್ಯ ಹೇಳುತ್ತೇನೆ” ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾನೆ. “ಈ ಷಡ್ಯಂತ್ರದ ಹಿಂದೆ 12 ಮಂದಿ ಇದ್ದಾರೆ” ಎಂದು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯಾವುದೋ ಹಣದ ಆಸೆಗೆ, ಒಂದು ಪವಿತ್ರ ಕ್ಷೇತ್ರಕ್ಕೆ, ಲಕ್ಷಾಂತರ ಭಕ್ತರ ನಂಬಿಕೆಗೆ ದ್ರೋಹ ಬಗೆದ ಚಿನ್ನಯ್ಯನಂತಹ ವ್ಯಕ್ತಿಗಳ ಮೇಲೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಷಡ್ಯಂತ್ರದ ಹಿಂದಿರುವ ನಿಜವಾದ ರೂವಾರಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

