ಬೆಳಗಾವಿ: ಕುಡಿಯುವ ನೀರಿಗಾಗಿ ವಡಗಾಂವ್‌ನಲ್ಲಿ ಮಹಿಳೆಯರ ಆಕ್ರೋಶ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಘರ್ಷಣೆ

Spread the love

ಬೆಳಗಾವಿ: “ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ” ಎಂಬ ಮಾತಿಗೆ ಇಂದು ವಡಗಾಂವ್‌ನ ರಾಯತ ಗಲ್ಲಿಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಮೂಲಭೂತ ಸೌಕರ್ಯವಾದ ಕುಡಿಯುವ ನೀರಿಗಾಗಿ ಬೀದಿಗಿಳಿದ ಮಹಿಳೆಯರು, ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನಿಂತ ಪರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

​ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ರಾಯತ ಗಲ್ಲಿಯ ನಿವಾಸಿಗಳು, ಇಂದು ಮಹಾನಗರ ಪಾಲಿಕೆಯ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಪದೇ ಪದೇ ದೂರು ನೀಡಿದರೂ ಕಿವುಡಾಗಿದ್ದ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಲು ನೂರಾರು ಮಹಿಳೆಯರು ರಸ್ತೆಗಿಳಿದರು. ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಮಹಿಳೆಯರು ಆಕ್ರೋಶದ ಕಟ್ಟೆ ಒಡೆದಂತೆ ಪ್ರತಿಭಟಿಸಿದರು.

​ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಮುಂದಾದಾಗ, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ-ನೂಕಾಟ ನಡೆಯಿತು. ಮಹಿಳೆಯರ ಈ ಆಕ್ರಮಣಕಾರಿ ನಿಲುವನ್ನು ಕಂಡ ಪೊಲೀಸರು ಒಂದು ಕ್ಷಣ ಕಸ್ತೂರಿ ನಿವಾಸದ ರಣರಂಗವನ್ನು ನೆನಪಿಸುವಂತಿದ್ದ ದೃಶ್ಯಕ್ಕೆ ಸಾಕ್ಷಿಯಾದರು. ಹನಿ ನೀರಿಗಾಗಿ ಇಷ್ಟೊಂದು ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಎಚ್ಚೆತ್ತುಕೊಳ್ಳಲಿ ಜನಪ್ರತಿನಿಧಿಗಳು:

ಜನರಿಂದ ಮತ ಪಡೆದು ಅಧಿಕಾರ ಅನುಭವಿಸುವ ಜನಪ್ರತಿನಿಧಿಗಳು ಹಾಗೂ ಎಸಿ ಕೊಠಡಿಗಳಲ್ಲಿ ಕುಳಿತು ಜನಸಾಮಾನ್ಯರ ಕಷ್ಟ ಅರಿಯದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮಹಿಳೆಯರು ತಾಳ್ಮೆ ಕಳೆದುಕೊಂಡು ರಸ್ತೆಗಿಳಿದರೆ ಏನಾಗಬಹುದು ಎಂಬುದಕ್ಕೆ ಈ ಘಟನೆಯೇ ಮುನ್ಸೂಚನೆ. ಇನ್ನಾದರೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎದ್ದು, ಶುದ್ಧ ಕುಡಿಯುವ ನೀರು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಯ ಕಿಚ್ಚು ಪಾಲಿಕೆಯ ಕಚೇರಿಗೂ ವ್ಯಾಪಿಸುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *