
ರಾಮದುರ್ಗ: ಟಾಟಾ ಏಸ್ ವಾಹನ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅರ್ಚಕರೊಬ್ಬರು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಮದುರ್ಗ ಪಟ್ಟಣದ ಶಿವನಮೂರ್ತಿ ದೇವಸ್ಥಾನದ ಬಳಿ ಭಾನುವಾರ ನಡೆದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಅರ್ಚಕರಾದ ವಿಜಯಕುಮಾರ ಗಣಪತಿ ಗೋಡಬೋಲೆ (54) ಮತ್ತು ಟಾಟಾ ಏಸ್ ವಾಹನದ ಚಾಲಕ, ಗುಲ್ಬರ್ಗಾದ ನಿವಾಸಿ ಅನೀಲ ರಮೇಶ ಬಿರಾದಾರ (21) ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಘಟನೆ ನಡೆದ ಸಂದರ್ಭದಲ್ಲಿ, ಸವದತ್ತಿಯಿಂದ ರಾಮದುರ್ಗದ ಕಡೆಗೆ ಬರುತ್ತಿದ್ದ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ, ಎದುರಿನಿಂದ ಬರುತ್ತಿದ್ದ ಟಿವಿಎಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕ ವಿಜಯಕುಮಾರ ಗೋಡಬೋಲೆ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದ ನಿವಾಸಿ ಯಮನೂರೇಶ ಸಿದ್ದಪ್ಪ ಕಬಾಡೆ (26) ಮತ್ತು ಬ್ಯಾಡಗಿ ತಾಲ್ಲೂಕಿನ ಕಲ್ಲದೇವರ ಗ್ರಾಮದ ದರ್ಶನ ಬಸಯ್ಯ ಹಿರೇಮಠ (23) ಅವರನ್ನು ಸ್ಥಳೀಯರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮನೂರೇಶ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ, ದರ್ಶನ ಅವರನ್ನು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸವಿತಾ ಮುನ್ಯಾಳ ಮತ್ತು ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

