“ಅಂಬೇಡ್ಕರ್ ಸಂವಿಧಾನ ವಿರೋಧಿಸುವ ಆರ್‌ಎಸ್‌ಎಸ್‌, ಸಂಘ ಪರಿವಾರದ ಬಗ್ಗೆ ಎಚ್ಚರವಿರಲಿ”: ಸಿಎಂ ಸಿದ್ದರಾಮಯ್ಯ ಕರೆ

Spread the love

ಮೈಸೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದವರು ಹಿಂದೆಯೂ ವಿರೋಧಿಸಿದ್ದರು, ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ‌ ಕೇಂದ್ರದ ರಜತ ಮಹೋತ್ಸವ ಹಾಗೂ ನೂತನ “ವಿಶ್ವ ಜ್ಞಾನಿ ಅಂಬೇಡ್ಕರ್ ಸಭಾ ಭವನ” ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಕೇವಲ ಗಳಿಕೆಗಾಗಿ ಬಳಸಲಿಲ್ಲ. ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಸಂಪಾದನೆ ಮಾಡಿ, ಆ ಜ್ಞಾನವನ್ನು ತಮ್ಮ ಬದುಕಿನುದ್ದಕ್ಕೂ ಸಮಾಜದ ಬದಲಾವಣೆಗೆ ಬಳಸಿದರು. ವಿಶ್ವದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಅನ್ವಯವಾಗುವ ವಿಶ್ವ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಚೇತನ ಅಂಬೇಡ್ಕರ್ ಎಂದು ಸಿಎಂ ಬಣ್ಣಿಸಿದರು.

‘ಸಾವರ್ಕರ್, ಡಾಂಗೆ ಸೋಲಿಸಿದ್ದು’ ಸತ್ಯ:
ಅಂಬೇಡ್ಕರ್ ಅವರ ಹೆಸರಿನಲ್ಲಿ ಬಿಜೆಪಿಯವರು ಹಾಗೂ ಸಂಘ ಪರಿವಾರದವರು ಅಪಪ್ರಚಾರ ನಡೆಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ, “ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ” ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂತಹ ಸತ್ಯಗಳನ್ನು ಸಮಾಜದ ಮುಂದಿಡುವ ಮೂಲಕ ಸಂಘ ಪರಿವಾರದ ಸುಳ್ಳುಗಳನ್ನು ಬಯಲಿಗೆಳೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರುದಲ್ಲಿ ‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸ್ಥಾಪಿಸಲು ಕಾರಣ ಅಂಬೇಡ್ಕರ್ ಅವರನ್ನು ಓದಿಕೊಂಡವರು ಅವರ ಮಾರ್ಗದಲ್ಲಿ ನಡೆಯಲಿ ಎಂಬುದೇ ಆಗಿದೆ. ಅಂಬೇಡ್ಕರ್ ಅವರಿಗೆ ಅವರೇ ಸಾಟಿ; ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದು ಮುಖ್ಯಮಂತ್ರಿ ಆಶಿಸಿದರು.

ಸನಾತನಿಗಳ ಬಗ್ಗೆ ಎಚ್ಚರಿಕೆ:
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಸನಾತನಿ ಒಬ್ಬ ಶೂ ಎಸೆದಿರುವುದು ಸಮಾಜದಲ್ಲಿ ಸನಾತನಿಗಳು ಮತ್ತು ಪಟ್ಟಭದ್ರರು ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ. ಈ ಶೂ ಎಸೆತವನ್ನು ದಲಿತರಷ್ಟೇ ಅಲ್ಲ, ಪ್ರತಿಯೊಬ್ಬ ಪ್ರಜ್ಞಾವಂತರೂ ವಿರೋಧಿಸಬೇಕು. ಹೀಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದು ಸಿಎಂ ಹೇಳಿದರು.

ತಮ್ಮ ಜೀವನದಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿರುವುದಾಗಿ ಹೇಳಿದ ಅವರು, “ಈ ಕಾರಣಕ್ಕೇ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢ ನಂಬಿಕೆ ಆಚರಿಸುವವರಾಗಬೇಡಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು ವಿವಿಯಲ್ಲಿ ಅಂಬೇಡ್ಕರ್ ಅಧ್ಯಯನ‌ ಕೇಂದ್ರವಾಗಿ 25 ವರ್ಷಗಳಾಗಿರುವ ಸಂದರ್ಭದಲ್ಲಿ ನೂತನ ಸಭಾ ಭವನ ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹ ಎಂದರು. ಸಮಾಜದ ಪರವಾಗಿ ಇರುವವರ ಜೊತೆ ಸಹವಾಸ ಮಾಡಿ, ಸಮಾಜ ಬದಲಾವಣೆಯ ವಿರೋಧಿಗಳಾದ ಸನಾತನಿಗಳ ಸಹವಾಸ ಮಾಡಬೇಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

Leave a Reply

Your email address will not be published. Required fields are marked *