ಮೈಸೂರು ದಸರಾಕ್ಕೆ ಬಾನು ಮುಸ್ತಾಕ್ ಚಾಲನೆ: ಭಾವುಕರಾದ ಲೇಖಕಿ, ಸಿಎಂ ಹೇಳಿದ್ದೇನು?

Spread the love

ಮೈಸೂರು: ಹಲವು ಚರ್ಚೆ ಮತ್ತು ವಿವಾದಗಳ ನಡುವೆ, ಖ್ಯಾತ ಲೇಖಕಿ ಬಾನು ಮುಸ್ತಾಕ್ ಅವರು ಬುಧವಾರ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ತಮ್ಮ ಜೀವನದ ಅತ್ಯಂತ ಗೌರವದ ಘಳಿಗೆ ಎಂದು ಬಣ್ಣಿಸಿ ಭಾವುಕರಾದರು.
ದಸರಾ ಉದ್ಘಾಟನೆಯ ನಂತರ ಮಾತನಾಡಿದ ಬಾನು ಮುಸ್ತಾಕ್, “ಬೂಕರ್ ಪ್ರಶಸ್ತಿ ಬಂದಾಗ ನನ್ನ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುವುದಾಗಿ ಹರಕೆ ಹೊತ್ತಿದ್ದಳು. ಈಗ ಸರ್ಕಾರ ನನ್ನನ್ನು ಕರೆಸಿಕೊಂಡಿರುವುದು ದೇವಿಯೇ ಕರೆಸಿಕೊಂಡಂತೆ. ಎಷ್ಟೇ ಅಡೆತಡೆಗಳಿದ್ದರೂ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ದೇವಿಯ ದರ್ಶನ ಪಡೆದಿದ್ದು ನನಗೆ ಬಹಳ ಸಂತಸ ತಂದಿದೆ,” ಎಂದರು.
ಈ ವೇಳೆ ಚಾಮುಂಡಿ ಪ್ರಾಧಿಕಾರದಿಂದ ಅವರಿಗೆ ನೀಲಿ ಸೀರೆ ನೀಡಿ ಗೌರವಿಸಲಾಯಿತು. ಸೀರೆ ಪಡೆದ ನಂತರ ಭಾವುಕರಾದ ಬಾನು ಮುಸ್ತಾಕ್, ಕಣ್ಣೀರು ಒರೆಸಿಕೊಂಡರು

ಹಿಂದೂ ಧರ್ಮದೊಂದಿಗೆ ಅವಿನಾಭಾವ ಸಂಬಂಧ: ಬಾನು ಮುಸ್ತಾಕ್
ದಸರಾ ಉದ್ಘಾಟನೆ ಕುರಿತು ವಿರೋಧ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಉತ್ತರ ನೀಡಿದ ಬಾನು ಮುಸ್ತಾಕ್, “ಬಾಲ್ಯದಿಂದಲೂ ನಾನು ಅನೇಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಿದ್ದೇನೆ ಮತ್ತು ಪುಷ್ಪಾರ್ಚನೆ ಮಾಡಿದ್ದೇನೆ. ನನಗೂ ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಈ ಬಗ್ಗೆ ನನ್ನ ಆತ್ಮಕಥನದಲ್ಲಿ ಕೂಡ ವಿವರಿಸಿದ್ದೇನೆ. ಆ ಪುಸ್ತಕ ನಾಳೆ ಬಿಡುಗಡೆ ಆಗಲಿದೆ,” ಎಂದು ತಿಳಿಸಿದರು.

ದಸರಾ ಉದ್ಘಾಟನೆಯ ನಂತರ, ಹಿಂದೂ ಸಂಪ್ರದಾಯದಂತೆ ಮಹಾ ಮಂಗಳಾರತಿಯಲ್ಲಿ ಭಾಗವಹಿಸಿದ ಅವರು, ಹೂವು ಮುಡಿ, ಆರತಿ ತೆಗೆದುಕೊಂಡು, ನಂತರ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಕ್ಕೆ ಚಾಲನೆ ನೀಡಿದರು.
“ಮೈಸೂರಿನ ಅರಸರು ಮುಸ್ಲಿಮರ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಮುಸ್ಲಿಮರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದು ಇದಕ್ಕೆ ನಿದರ್ಶನ. ನನ್ನ ಮಾವ ಕೂಡ ಅಂಗರಕ್ಷಕರಾಗಿದ್ದರು,” ಎಂದು ಸ್ಮರಿಸಿದರು. “ಆಕಾಶ ಮತ್ತು ಭೂಮಿ ಯಾರನ್ನೂ ಬೇರ್ಪಡಿಸುವುದಿಲ್ಲ, ಆದರೆ ಮನುಷ್ಯ ಮಾತ್ರ ಗಡಿಗಳನ್ನು ಹಾಕುತ್ತಾನೆ. ಇದು ಹೋಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಕೀಯ, ಆರ್ಥಿಕ, ಮತ್ತು ಸಾಮಾಜಿಕ ನ್ಯಾಯದ ಪರವಾಗಿದ್ದರು,” ಎಂದು ಬಾನು ಮುಸ್ತಾಕ್ ಹೇಳಿದರು.

ಮನುಷ್ಯತ್ವಕ್ಕೆ ಆದ್ಯತೆ ಎಂದ ಸಿಎಂ ಸಿದ್ದರಾಮಯ್ಯ
ದಸರಾ ಮಹೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದ್ವೇಷಿಸುವುದಕ್ಕಿಂತ ಮನುಷ್ಯತ್ವವೇ ಮುಖ್ಯ ಎಂದು ಸ್ಪಷ್ಟಪಡಿಸಿದರು.
“ಬಾನು ಮುಸ್ತಾಕ್ ಅವರು ಮುಸ್ಲಿಂ ಮಹಿಳೆಯಾಗಿದ್ದರೂ ಮೊದಲು ಮನುಷ್ಯರೇ. ಮನುಷ್ಯನನ್ನು ಪ್ರೀತಿಸಬೇಕೇ ಹೊರತು, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದ್ವೇಷಿಸಬಾರದು. ನಾವೆಲ್ಲರೂ ಪರಸ್ಪರ ಪ್ರೀತಿಯಿಂದ ಇರಬೇಕು. ದ್ವೇಷದಿಂದ ಇರುವುದು ಮನುಷ್ಯತ್ವದ ಲಕ್ಷಣವಲ್ಲ,” ಎಂದರು. ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಬಹುಸಂಖ್ಯಾತ ಜನರು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸಂವಿಧಾನ ಮತ್ತು ಇತಿಹಾಸದ ಕುರಿತು ಮಾತನಾಡಿದ ಸಿಎಂ, “ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಯಾರಿಗೆ ಇತಿಹಾಸ ಗೊತ್ತಿಲ್ಲವೋ, ಅವರಿಗೆ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದರು. ಹಾಗಾಗಿ ಪ್ರತಿಯೊಬ್ಬರೂ ಇತಿಹಾಸ ತಿಳಿದುಕೊಳ್ಳಬೇಕು. ರಾಜಕೀಯಕ್ಕಾಗಿ ಇತಿಹಾಸವನ್ನು ತಿರುಚುವುದು ತಪ್ಪು. ಇತಿಹಾಸವನ್ನು ರಾಜಕೀಯಕ್ಕೆ ಬಳಸಬಾರದು,” ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

“ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಒಪ್ಪಿಕೊಂಡಿದೆ. ಜಾತ್ಯತೀತ ಮತ್ತು ಧರ್ಮತೀತ ಭಾವನೆಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬಂದಾಗ ಮಾತ್ರ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ,” ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *