
ಬೆಂಗಳೂರು: ಫಲಾನುಭವಿಗಳ ವಂತಿಗೆ ಪಾವತಿಯಾಗದೇ ಸ್ಥಗಿತಗೊಂಡಿದ್ದ ವಸತಿ ಯೋಜನೆಗಳ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಬಡವರ ವಂತಿಗೆಯನ್ನು ಸರ್ಕಾರವೇ ಭರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದಾರೆ.
ಸದನದಲ್ಲಿ ಶಾಸಕ ಸಿದ್ದು ಪಾಟೀಲ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಈ ನಿರ್ಧಾರದಿಂದಾಗಿ ವಸತಿ ಯೋಜನೆಗಳು ಮತ್ತೆ ವೇಗ ಪಡೆದುಕೊಂಡಿವೆ ಎಂದು ವಿವರಿಸಿದರು. ಈಗಾಗಲೇ ಈ ಉದ್ದೇಶಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 36,789 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 40,345 ಮನೆಗಳ ಹಂಚಿಕೆಗೆ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿಗಳು ಈ ಯೋಜನೆಗಳನ್ನು 2026 ರೊಳಗೆ ಪೂರ್ಣಗೊಳಿಸಲು ಸೂಚಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಅರವಿಂದ್ ಬೆಲ್ಲದ್ ಅವರ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ 47,870 ಮನೆಗಳ ಯೋಜನೆಯೂ ಫಲಾನುಭವಿಗಳ ವಂತಿಗೆ ಪಾವತಿಯಾಗದೇ ಸ್ಥಗಿತಗೊಂಡಿತ್ತು. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಸರ್ಕಾರವೇ ವಂತಿಗೆ ಭರಿಸಲು ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಹೇಳಿದರು. ಸಂಪುಟಕ್ಕೆ ತಂದು ಒಪ್ಪಿಗೆ ಪಡೆದ ನಂತರ, ಆ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

