
ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ನಡೆಯಲಿರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಲ್ಲಿರುವ ಲೋಪಗಳನ್ನು ಸರಿಪಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದ ಪ್ರಮುಖ ನಾಯಕರೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ, ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಂಡುಬಂದ ಮತದಾರರ ಪಟ್ಟಿಯ ಅಕ್ರಮಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸುರ್ಜೇವಾಲ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮತದಾರರ ಪಟ್ಟಿ ಪರಿಷ್ಕರಣೆ: ಪ್ರಮುಖ ಆದ್ಯತೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ ನಡೆಸುತ್ತದೆಯಾದರೂ, ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಹೊಣೆ ರಾಜ್ಯ ವ್ಯಾಪ್ತಿಯ ಅಧಿಕಾರಿಗಳಿಗಿದೆ. ಈ ಹಿನ್ನೆಲೆಯಲ್ಲಿ, ಈ ಹಿಂದೆ ನಡೆದ ಲೋಪಗಳನ್ನು ಸರಿಪಡಿಸಿ, ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸುರ್ಜೇವಾಲ ಸಲಹೆ ನೀಡಿದ್ದಾರೆ. ಈ ಕಾರ್ಯಕ್ಕೆ ಸಚಿವ ಸಂಪುಟದ ಸದಸ್ಯರು ಕಾಲಕಾಲಕ್ಕೆ ನಿಗಾವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಅಕ್ರಮಗಳ ಪಟ್ಟಿ:
ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಈ ಹಿಂದೆ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟರ ಮತಗಳನ್ನು ತೆಗೆದುಹಾಕಿರುವುದು, ಅನ್ಯ ರಾಜ್ಯಗಳ ಮತದಾರರನ್ನು ಸೇರ್ಪಡೆಗೊಳಿಸಿರುವುದು, ನಕಲಿ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದು ಮತ್ತು ಒಬ್ಬ ವ್ಯಕ್ತಿಯ ಹೆಸರು ಎರಡಕ್ಕಿಂತ ಹೆಚ್ಚು ಕಡೆಗಳಲ್ಲಿ ನಮೂದಾಗಿರುವಂತಹ ಪ್ರಕರಣಗಳು ವ್ಯಾಪಕವಾಗಿ ಕಂಡುಬಂದಿವೆ. ಈ ಎಲ್ಲ ಅಕ್ರಮಗಳನ್ನು ಸರಿಪಡಿಸಬೇಕು ಎಂದು ಸುರ್ಜೇವಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ನಿಷ್ಠರಿಗೆ ಆದ್ಯತೆ, ವಲಸಿಗರಿಗೆ ಷರತ್ತು:
ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳುವಂತೆ ಸುರ್ಜೇವಾಲ ಸೂಚಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು. ವಲಸೆ ಬಂದವರಿಗೆ ಟಿಕೆಟ್ ನೀಡಬೇಕಾದರೆ, ಸ್ಥಳೀಯ ನಾಯಕರೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಅವರು ತಾಕೀತು ಮಾಡಿದ್ದಾರೆ. ವಲಸಿಗ ಅಭ್ಯರ್ಥಿಗಳ ಸಂಖ್ಯೆ ಶೇ. 10ಕ್ಕಿಂತ ಹೆಚ್ಚಿರಬಾರದು ಎಂದೂ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಗಾಗಿ ಸಂಪನ್ಮೂಲ ಹಂಚಿಕೆ, ಕ್ಷೇತ್ರವಾರು ಚುನಾವಣಾ ಉಸ್ತುವಾರಿಗೆ ನಿಯೋಜಿಸಬೇಕಾದ ಸಚಿವರು ಮತ್ತು ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿ ಈ ತಿಂಗಳ ಅಂತ್ಯದೊಳಗೆ ಎಐಸಿಸಿಗೆ ಸಲ್ಲಿಸುವಂತೆ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಸುರ್ಜೇವಾಲ ಅವರ ಈ ಸಭೆಯು ಮಹತ್ವ ಪಡೆದುಕೊಂಡಿದೆ.

