ಪಿಒಪಿ ಗಣೇಶ ಮೂರ್ತಿ ನಿಷಿದ್ಧ: ಮಾರಾಟಗಾರರು, ತಯಾರಕರಿಗೆ ₹10 ಸಾವಿರ ದಂಡ, ಜೈಲು ಶಿಕ್ಷೆ ಎಚ್ಚರಿಕೆ

Spread the love

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮತ್ತು ಬಣ್ಣಲೇಪಿತ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಆದೇಶವನ್ನು ಉಲ್ಲಂಘಿಸುವವರಿಗೆ ₹10,000 ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತು ರಾಜ್ಯ ಸರ್ಕಾರವು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸ್ನೇಹಿ ಹಬ್ಬ ಆಚರಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಕಾನೂನು ಬಾಹಿರ ಕಾರ್ಯ
ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವು ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಕಲಂ 33(ಎ) ಅನ್ವಯ ಕಾನೂನುಬಾಹಿರವಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿದರೆ, ಕಲಂ 45(ಎ) ಅನ್ವಯ ₹10,000 ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಪಿಒಪಿ ಗಣೇಶ ಮೂರ್ತಿಗಳು ಕೆರೆ ಹಾಗೂ ಇತರೆ ಜಲಮೂಲಗಳನ್ನು ಕಲುಷಿತಗೊಳಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರವೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಮತ್ತು ಕೃತಕ ಬಣ್ಣಗಳ ಗಣಪತಿ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ನಗರಸಭೆ, ಪೊಲೀಸ್ ಮತ್ತು ಅಗ್ನಿಶಾಮಕ ದಳ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸರ್ಕಾರ ಸೂಚಿಸಿದೆ.

Leave a Reply

Your email address will not be published. Required fields are marked *