ಯೂಟ್ಯೂಬರ್‌ಗಳ ಹಾವಳಿ ನಿಯಂತ್ರಣಕ್ಕೆ ಹೊಸ ಕಾನೂನು: ಗೃಹ ಸಚಿವ ಡಾ. ಜಿ. ಪರಮೇಶ್ವರ್

Spread the love

ಬೆಂಗಳೂರು: ಕೆಲವು ಯೂಟ್ಯೂಬ್ ಚಾನೆಲ್‌ಗಳು ವ್ಯಕ್ತಿಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿರುವ ಬಗ್ಗೆ ನಿಯಂತ್ರಣ ಸಾಧಿಸಲು ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಯೂಟ್ಯೂಬರ್‌ಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಈಗಾಗಲೇ ಒಂದು ತಂಡವನ್ನು ರಚಿಸಲಾಗಿದ್ದು, 24 ಗಂಟೆಯೂ ಅವರ ಮೇಲೆ ನಿಗಾ ಇಡಬೇಕಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಎಸ್. ರವಿ ಅವರು ಈ ವಿಷಯ ಪ್ರಸ್ತಾಪಿಸಿ, ಯೂಟ್ಯೂಬರ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೃತಕ ಬುದ್ಧಿಮತ್ತೆ ಸಹ ಒಂದು ಅಪಾಯಕಾರಿ ಅಂಶವಾಗಿದ್ದು, ಇವೆಲ್ಲ ಸಮಾಜಕ್ಕೆ ದೊಡ್ಡ ಅಪಾಯವನ್ನು ತರಲಿವೆ ಎಂದು ಎಚ್ಚರಿಸಿದರು.

ಸೈಬರ್ ಕ್ರೈಂ ತಡೆಗೆ ಎಂಜಿನಿಯರ್‌ಗಳ ನೇಮಕ
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿರ್ವಹಿಸಲು ಎಂಜಿನಿಯರಿಂಗ್ ಮತ್ತು ಎಂಟೆಕ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

2023 ರಲ್ಲಿ 22,253 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು, ₹1,287 ಕೋಟಿ ವಂಚನೆಯಾಗಿದೆ. 2024 ರಲ್ಲಿ 22,472 ಪ್ರಕರಣಗಳಲ್ಲಿ ₹2,515 ಕೋಟಿ ಹಾಗೂ 2025 ರಲ್ಲಿ ಈವರೆಗೆ 8,620 ಪ್ರಕರಣಗಳಲ್ಲಿ ₹861 ಕೋಟಿ ವಂಚನೆಯಾಗಿದೆ. ಸೈಬರ್ ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದೂ ಅವರು ಹೇಳಿದರು.

ಡ್ರಗ್ಸ್ ವಿರುದ್ಧ ಸರ್ಕಾರದ ಸಮರ
ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಿಸುವುದು ಸರ್ಕಾರದ ಗುರಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 14,485 ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 5,304 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ 318 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, 200 ಮಂದಿಯನ್ನು ಗಡಿಪಾರು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಾದಕ ವಸ್ತು ವಿರೋಧಿ ಅಭಿಯಾನದ ಮೂಲಕ 15 ಲಕ್ಷ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಅಲ್ಲದೆ, ಡ್ರಗ್ಸ್ ಪ್ರಕರಣಗಳ ಪತ್ತೆಗೆ ಪ್ರತ್ಯೇಕವಾಗಿ ‘ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ’ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *