



ಬೆಂಗಳೂರು: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಣೇಶ ಹಬ್ಬದ ವೇಳೆ ಡಿಜೆ ಮತ್ತು ಸೌಂಡ್ ಬಳಸದಂತೆ ಸರ್ಕಾರ ನಿರ್ಬಂಧ ವಿಧಿಸಿರುವ ಕ್ರಮವು ಶುಕ್ರವಾರ ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಈ ನಿರ್ಧಾರದಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರಶೋತ್ತರ ಕಲಾಪಕ್ಕೆ ಅಡ್ಡಿಪಡಿಸಿದರು.
ಶಶೀಲ್ ನಮೋಶಿ ಪ್ರಶ್ನೆ:
ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶಶೀಲ್ ನಮೋಶಿ, “ಗಣೇಶ ಹಬ್ಬಕ್ಕೆ ಡಿಜೆ ಮತ್ತು ಸೌಂಡ್ ಬಳಸಬಾರದು ಎಂದು ನಮ್ಮ ಜಿಲ್ಲೆಯಲ್ಲಿ ಆದೇಶ ನೀಡಲಾಗಿದೆ. ಬೆಂಗಳೂರಿನಲ್ಲಿ ಇಲ್ಲದ ಈ ನಿಯಮ ನಮಗೆ ಮಾತ್ರ ಯಾಕೆ?” ಎಂದು ಪ್ರಶ್ನಿಸಿದರು. “ಸ್ವಾತಂತ್ರ್ಯಕ್ಕಾಗಿ ತಿಲಕರು ಹಬ್ಬ ಶುರು ಮಾಡಿದಾಗ ಬ್ರಿಟಿಷರೇ ಅವಕಾಶ ಕೊಟ್ಟಿದ್ದರು. ಈಗ ಯಾಕೆ ಷರತ್ತು ಹಾಕುತ್ತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಪ್ರಶ್ನೆಗೆ ಸುನೀಲ್ ವಲ್ಯಾಪುರೆ, ಪ್ರದೀಪ್ ಶೆಟ್ಟರ್, ನವೀನ್, ರವಿಕುಮಾರ್, ಭಾರತಿ ಶೆಟ್ಟಿ ಮತ್ತು ಛಲವಾದಿ ನಾರಾಯಣ ಸ್ವಾಮಿ ದನಿಗೂಡಿಸಿದರು.
ಪ್ರದೀಪ್ ಶೆಟ್ಟರ್ ವಾಗ್ದಾಳಿ:
ಪ್ರದೀಪ್ ಶೆಟ್ಟರ್ ಮಾತನಾಡಿ, “ಹಿಂದೂ ಹಬ್ಬಗಳಿಗೆ ಮಾತ್ರ ಏಕೆ ಈ ರೀತಿಯ ನಿಯಮ? ಬೇರೆಯವರು ರಾತ್ರಿ ಧ್ವನಿವರ್ಧಕ ಬಳಸಲು ಅವಕಾಶ ಕೊಡುತ್ತೀರಿ,” ಎಂದು ಸರ್ಕಾರದ ವಿರುದ್ಧ ಕುಟುಕಿದರು. ಚಿತ್ರದುರ್ಗದಲ್ಲಿಯೂ ನಿರ್ಬಂಧ ಹೇರಲಾಗಿದೆ ಎಂದು ಕೆ.ಎಸ್. ನವೀನ್ ದೂರಿದರು.
ಸಭಾನಾಯಕ ಸ್ಪಷ್ಟೀಕರಣ:
ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಭೋಸರಾಜ್, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಸೂಕ್ಷ್ಮ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು. ಆದರೆ, ಈ ಸ್ಪಷ್ಟೀಕರಣದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಗದ್ದಲವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸೌಹಾರ್ದ ಸಹಕಾರಿ ಮಸೂದೆಗೆ ಪರಿಷತ್ ಅನುಮೋದನೆ
ಈ ಹಿಂದೆ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಯು ಶುಕ್ರವಾರ ಪರಿಷತ್ನಲ್ಲಿ ಮತ್ತೊಮ್ಮೆ ಮಂಡನೆಯಾಗಿ ಅನುಮೋದನೆ ಪಡೆದುಕೊಂಡಿತು. ಈ ಮಸೂದೆಗೆ ಪರಿಷತ್ನಲ್ಲಿ ಮೊದಲ ಬಾರಿಗೆ ಸೋಲಾಗಿದ್ದ ಕಾರಣ, ಕೆಲವು ತಿದ್ದುಪಡಿಗಳೊಂದಿಗೆ ವಿಧಾನಸಭೆಯು ಗುರುವಾರ ಈ ಮಸೂದೆಯನ್ನು ಮರು ಅಂಗೀಕರಿಸಿತ್ತು. ಶುಕ್ರವಾರ ಮಸೂದೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಅವರು ಮತ್ತೊಮ್ಮೆ ಮಂಡಿಸಿ ಅಂಗೀಕಾರ ಪಡೆದುಕೊಂಡರು.
ಇದೇ ವೇಳೆ, ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ (ತಿದ್ದುಪಡಿ) ಮಸೂದೆ ಹಾಗೂ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೂ ಪರಿಷತ್ ಅನುಮೋದನೆ ನೀಡಿತು. ಅಲ್ಲದೆ, ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತಾದ ವಿಶೇಷ ಸದನ ಸಮಿತಿಯ ವರದಿಯನ್ನು ಸದನಕ್ಕೆ ಸಲ್ಲಿಸಿದರು.

