
ಬೆಂಗಳೂರು: ರಾಜ್ಯ ಸರ್ಕಾರವು ‘ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ಮಸೂದೆ-2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಇದು ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಿದೆ. ಈ ಹೊಸ ಮಸೂದೆಯ ಪ್ರಕಾರ, ಇನ್ಮುಂದೆ ಯಾವುದೇ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆಯದಿದ್ದರೆ, ಆಯೋಜಕರಿಗೆ ಒಂದು ಕೋಟಿ ರೂಪಾಯಿಗಳವರೆಗೆ ದಂಡ ಮತ್ತು ಮೂರರಿಂದ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿದರು.
ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸುವವರ ವಿರುದ್ಧ ಕನಿಷ್ಠ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ಅಥವಾ 1 ಕೋಟಿ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜನಸಂದಣಿಯಿಂದ ಪ್ರಾಣಹಾನಿಯಾದರೆ ಕಠಿಣ ಶಿಕ್ಷೆ:
ಯಾವುದೇ ವ್ಯಕ್ತಿಯ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಜನಸಂದಣಿ ಹೆಚ್ಚಾಗಿ ದುರಂತ ಸಂಭವಿಸಿದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಜನಸಂದಣಿ ವಿಪತ್ತಿನಿಂದ ಪ್ರಾಣಹಾನಿಯಾದಲ್ಲಿ, ಅದಕ್ಕೆ ಕಾರಣರಾದವರಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೂ ವಿಧಿಸಲಾಗುತ್ತದೆ. ಅಲ್ಲದೆ, ಜನಸಂದಣಿಯಲ್ಲಿ ದೈಹಿಕ ಗಾಯಗಳಿಗೆ ಕಾರಣರಾದವರಿಗೆ ಮೂರರಿಂದ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.
ಈ ಮಸೂದೆಯು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಅಕ್ರಮವಾಗಿ ದೊಡ್ಡ ಸಂಖ್ಯೆಯ ಜನರನ್ನು ಸೇರಿಸುವುದನ್ನು ತಡೆಯುವ ಉದ್ದೇಶ ಹೊಂದಿದೆ.

