
ಬೆಂಗಳೂರು: ರಾಜ್ಯದಲ್ಲಿ ಕೃಷಿ ಹೊಂಡಗಳಿಂದ ಸಂಭವಿಸುತ್ತಿರುವ ದುರ್ಘಟನೆಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ‘ಕೃಷಿ ಭಾಗ್ಯ’ ಯೋಜನೆಯಡಿ ನಿರ್ಮಿಸಲಾಗುವ ಕೃಷಿ ಹೊಂಡಗಳಿಗೆ ಇನ್ನು ಮುಂದೆ ಕಡ್ಡಾಯವಾಗಿ ತಂತಿಬೇಲಿ ಮತ್ತು ಸೂಚನಾ ಫಲಕ ಅಳವಡಿಸಬೇಕು.
ಈ ನಿಯಮ ಪಾಲಿಸದಿದ್ದರೆ ಫಲಾನುಭವಿಗಳಿಗೆ ನೀಡಲಾಗುವ ಅನುದಾನದಲ್ಲಿ ಶೇ. 25ರಷ್ಟು ಕಡಿತ ಮಾಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಕೃಷಿ ಹೊಂಡಗಳಿಗೆ ಬಿದ್ದು 45 ಮಕ್ಕಳು ಮೃತಪಟ್ಟಿದ್ದಾರೆ. ಅಲ್ಲದೆ, ವಯಸ್ಕರು ಮತ್ತು ಜಾನುವಾರುಗಳು ಕೂಡ ಇಂತಹ ಅಪಘಾತಗಳಿಗೆ ಬಲಿಯಾಗಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ, ದುರಂತಗಳನ್ನು ತಡೆಯಲು ಸರ್ಕಾರ ಈ ಗಂಭೀರ ನಿರ್ಧಾರ ಕೈಗೊಂಡಿದೆ.
ಹೊಸ ಮಾರ್ಗಸೂಚಿಗಳು:
- ಕೃಷಿ ಹೊಂಡದ ಸುತ್ತಲೂ ಕಡ್ಡಾಯವಾಗಿ ತಂತಿ ಬೇಲಿ ನಿರ್ಮಿಸಬೇಕು.
- ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಸೂಚನಾ ಫಲಕವನ್ನು ಅಳವಡಿಸಬೇಕು.
- ತುರ್ತು ಸಂದರ್ಭಗಳಲ್ಲಿ ರಕ್ಷಣೆಗಾಗಿ ಹೊಂಡದಲ್ಲಿ ಹಗ್ಗ ಮತ್ತು ಟ್ಯೂಬ್‌ಗಳನ್ನು ತೇಲಿಬಿಡಬೇಕು.
2023-24 ಮತ್ತು 2024-25ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿದ ಎಲ್ಲ ಫಲಾನುಭವಿಗಳಿಗೂ ಈ ಮಾರ್ಗಸೂಚಿಗಳು ಅನ್ವಯಿಸುತ್ತವೆ.
ರೈತರು ತಮ್ಮ ಕುಟುಂಬ ಮತ್ತು ಜಾನುವಾರುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ.

