
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಪ್ರಸ್ತುತ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿರುವ ನಿಖಿಲ್, ‘ಜನರೊಂದಿಗೆ ಜನತಾದಳ’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸ ಪೂರ್ಣಗೊಂಡ ಬಳಿಕ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟ ಕಟ್ಟಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜುಲೈನಲ್ಲಿ ಆರಂಭವಾಗಿರುವ ಈ ಪ್ರವಾಸ 50 ಕ್ಷೇತ್ರಗಳಲ್ಲಿ ಮುಗಿದಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷ ಸಂಘಟನೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಅಗತ್ಯ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದೊಂದು ವರ್ಷದಿಂದ ಈ ಕುರಿತು ಆಂತರಿಕ ಚರ್ಚೆಗಳು ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರೇ ಈ ಸ್ಥಾನಕ್ಕೆ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.
ದೀಪಾವಳಿ ವೇಳೆಗೆ ಅಧಿಕೃತ ಘೋಷಣೆ?
ನಿಖಿಲ್ ಅವರ ರಾಜ್ಯ ಪ್ರವಾಸದ ನಂತರ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನ ‘ಮಿಸ್ಕಾಲ್’ ಮೂಲಕ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ.
ಈ ಪ್ರವಾಸದ ವೇಳೆ ನಿಖಿಲ್, ಪ್ರತಿ ಕ್ಷೇತ್ರಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ, ಕಾರ್ಯಕರ್ತರಿಗೆ ಪಕ್ಷ ಸಂಘಟನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂದಿನ ಚುನಾವಣೆಗಳಿಗೆ ಕಾರ್ಯಕರ್ತರು ಸಿದ್ಧರಾಗಲು ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾ, ಅವರೊಂದಿಗೆ ಸಂಬಂಧ ಗಟ್ಟಿಗೊಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದು ಪಕ್ಷಕ್ಕೆ ಹೊಸ ಹುರುಪು ತಂದುಕೊಡುವ ನಿರೀಕ್ಷೆಯಿದೆ.

