ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಸರ್ಕಾರ ಸಿದ್ಧ: ಸಚಿವ ಕೆ.ಹೆಚ್. ಮುನಿಯಪ್ಪ

Spread the love

ಬೆಂಗಳೂರು: ರಾಜ್ಯದಲ್ಲಿನ ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ಆರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಈ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅರ್ಹ ಬಡವರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಅವರು ಹೇಳಿದರು.

ವಿಧಾನ ಪರಿಷತ್‌ನ ಪ್ರಶೋತ್ತರ ಕಲಾಪದಲ್ಲಿ ಶಾಸಕರಾದ ಪ್ರತಾಪ ಸಿಂಹ ನಾಯಕ್ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗಳಿಗೆ ಸಚಿವರು ಈ ಉತ್ತರ ನೀಡಿದರು. “ರಾಜ್ಯದಲ್ಲಿ ಪ್ರಸ್ತುತ ಶೇ. 74 ರಷ್ಟು ಬಿಪಿಎಲ್ ಕಾರ್ಡುಗಳಿವೆ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿಯೂ ಇಷ್ಟೊಂದು ಪ್ರಮಾಣದ ಬಿಪಿಎಲ್ ಕಾರ್ಡುಗಳಿಲ್ಲ” ಎಂದು ಸಚಿವರು ಮಾಹಿತಿ ನೀಡಿದರು.
ಪ್ರಸ್ತುತ 1.28 ಕೋಟಿ ಕಾರ್ಡುಗಳಿಗೆ ಅಕ್ಕಿ ವಿತರಿಸಲಾಗುತ್ತಿದೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಸಿರುವ 3.27 ಲಕ್ಷ ಬಿಪಿಎಲ್ ಕಾರ್ಡುಗಳನ್ನು ನೀಡುವುದು ಬಾಕಿ ಇದೆ. ಎಪಿಎಲ್ ಕಾರ್ಡ್‌ಗೆ ಅರ್ಹರಿದ್ದರೂ ಕೆಲವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಆದ್ದರಿಂದ, ಅನರ್ಹರ ಪಡಿತರ ಚೀಟಿಗಳನ್ನು ರದ್ದುಪಡಿಸಿ, ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಕಾರ್ಡ್ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರತಾಪ ಸಿಂಹ ನಾಯಕ್ ಅವರು, “ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಜನರು ಕಾಯುತ್ತಿದ್ದು, ಬಡವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅನರ್ಹರ ಕಾರ್ಡ್‌ಗಳನ್ನು ರದ್ದು ಮಾಡಿ, ಅಗತ್ಯವಿರುವವರಿಗೆ ಪಡಿತರ ಚೀಟಿ ನೀಡಬೇಕು” ಎಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಸಚಿವರು, ಅಧಿವೇಶನದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *