ಬೆಂಗಳೂರಿನಲ್ಲಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, ಇಬ್ಬರು ಆಫ್ರಿಕಾ ಪ್ರಜೆಗಳ ಬಂಧನ

Spread the love

ಬೆಂಗಳೂರು: ಡ್ರಗ್ಸ್ ಮಾರಾಟ ದಂಧೆ ವ್ಯಾಪಕವಾಗಿ ಹರಡಿದ್ದು, ಈ ಕಳ್ಳದಂಧೆಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆಫ್ರಿಕಾ ಮೂಲದ ಪ್ರಜೆಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತ ಆರೋಪಿಗಳನ್ನು ಆಫ್ರಿಕಾ ಮೂಲದ ಪ್ರಜೆಗಳಾದ ಜೊಯಲ್ ಕಾಬೊಂಗ್ ಮತ್ತು ಮಹಿಳೆಯಾದ ಜೊಯ್ ಸಂಡೇ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದರು.

ಜೊಯಲ್ ಕಾಬೊಂಗ್ ಸುಮಾರು 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದರೆ, ಜೊಯ್ ಸಂಡೇ ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಇವರಿಬ್ಬರು ಮತ್ತೊಬ್ಬ ವಿದೇಶಿ ಪ್ರಜೆಯಿಂದ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಟ್ಟದಾಮಸಪುರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 2.150 ಕೆಜಿ ಎಂಡಿಎಂಎ (MDMA) ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸದ್ಯ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಈ ಡ್ರಗ್ಸ್ ಜಾಲದಲ್ಲಿ ಇನ್ನೂ ಹೆಚ್ಚಿನ ಜನರ ಪಾತ್ರ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *