
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹಕಚೇರಿ ‘ಕೃಷ್ಣಾ’ದಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವರ್ಷ 37 ಲಕ್ಷ ರೈತರಿಗೆ ಒಟ್ಟು ₹28 ಸಾವಿರ ಕೋಟಿ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದೆ.
ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟ ನಂತರ, ಮುಖ್ಯಮಂತ್ರಿಗಳ ಬಳಿಯೇ ಸಹಕಾರ ಖಾತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯ ಪ್ರಮುಖಾಂಶಗಳು:
- ಕೃಷಿ ಸಾಲ ವಿತರಣೆ: ಪ್ರಸಕ್ತ ಸಾಲಿನ ಗುರಿ ₹28 ಸಾವಿರ ಕೋಟಿಯಷ್ಟಿದೆ. ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 8,69,284 ರೈತರಿಗೆ ₹8,362.68 ಕೋಟಿ ಕೃಷಿ ಸಾಲ ವಿತರಿಸಲಾಗಿದೆ.
- ನಬಾರ್ಡ್ ಸಾಲದ ಮಿತಿ ಇಳಿಕೆ: ನಬಾರ್ಡ್ನಿಂದ ಪಡೆಯುವ ರಿಯಾಯಿತಿ ಬಡ್ಡಿದರದ ಸಾಲದ ಮಿತಿಯನ್ನು ಹಿಂದಿನ ಸಾಲಿನ ₹5,600 ಕೋಟಿಗಳಿಂದ ಪ್ರಸ್ತುತ ₹3,236.11 ಕೋಟಿಗೆ (ಶೇ. 42.21ರಷ್ಟು) ಇಳಿಕೆ ಮಾಡಿದೆ. ಆದರೂ, ಸಾಲ ವಿತರಣೆಯಲ್ಲಿ ಶೇ. 96.07ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಕಾಲದಲ್ಲಿ ಸಾಲ ವಿತರಣೆಗೆ ಸೂಚನೆ: ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಪ್ರತಿ ಜಿಲ್ಲೆಯಲ್ಲೂ ಖಚಿತಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
2024-25ನೇ ಸಾಲಿನಲ್ಲಿ ಒಟ್ಟು 29,75,598 ರೈತರಿಗೆ ₹25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ರೈತರ ಕಲ್ಯಾಣಕ್ಕಾಗಿ ಸಹಕಾರ ಇಲಾಖೆಯು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

