
ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿನ ಸರಿ-ತಪ್ಪುಗಳೇನು, ಅದರ ಹಿಂದೆ ಯಾವುದೇ ಷಡ್ಯಂತ್ರವಿದೆಯೇ ಎಂಬುದು ತನಿಖೆ ಪೂರ್ಣಗೊಂಡ ನಂತರ ಬಯಲಾಗುತ್ತದೆ. ಸುಳ್ಳು ಆಪಾದನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆ ಕಲಾಪದ ವೇಳೆ ಹೇಳಿದ್ದಾರೆ.
ಜವಾಬ್ದಾರಿಯುತ ದಕ್ಷ ಹಿರಿಯ ಅಧಿಕಾರಿಗಳಿಗೆ ಈ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅವರ ಮೇಲೆ ನಮಗೆ ನಂಬಿಕೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳದ ಮೇಲೆ ಅಪಾರ ನಂಬಿಕೆಯಿದ್ದು, ಅವರು ಈ ವಿಚಾರದಲ್ಲಿ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಯಾವ ಕಾನೂನು ಬಳಸಬೇಕೋ ಅದನ್ನು ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವಿರೋಧ ಪಕ್ಷಗಳಿಗೆ ತಾಳ್ಮೆ ವಹಿಸುವಂತೆ ಕೋರಿದ ಅವರು, “ಗೃಹ ಸಚಿವರು ಈ ವಿಚಾರದಲ್ಲಿ ಬದ್ಧರಾಗಿದ್ದಾರೆ. ವಿಪಕ್ಷಗಳು ತನಿಖೆಯ ಆರಂಭದಲ್ಲೇ ಎಸ್.ಐ.ಟಿ. ಬೇಡ ಎಂದು ಹೇಳಬೇಕಿತ್ತು. ಆದರೆ 15 ದಿನಗಳ ನಂತರ ಈ ಕುರಿತು ಮಾತನಾಡುತ್ತಿದ್ದೀರಿ. ಈ ಪ್ರಕರಣದಲ್ಲಿ ಷಡ್ಯಂತ್ರವಿರುವ ಸಾಧ್ಯತೆ ಇದ್ದು, ಇದೆಲ್ಲವೂ ಹೊರಬರಬೇಕು. ಅದಕ್ಕಾಗಿ ಗೃಹ ಸಚಿವರು ಕಾನೂನಿನಡಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ತಿಳಿಸಿದರು.
“ಯಾವುದೇ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಗೃಹಸಚಿವರು ಹೇಳಿದ್ದಾರೆ. ವಿರೋಧ ಪಕ್ಷದವರೂ ಈ ಹಿಂದೆ ಅಧಿಕಾರದಲ್ಲಿದ್ದವರು. ಹಾಗಾಗಿ ತನಿಖೆ ವಿಚಾರಗಳನ್ನು ಬಹಿರಂಗಪಡಿಸುವ ಮೊದಲು ತಾಳ್ಮೆಯಿಂದ ಇರಿ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ” ಎಂದು ಮನವಿ ಮಾಡಿದರು.
“ವ್ಯಕ್ತಿಯೊಬ್ಬ ತಲೆಬುರುಡೆ ಹಿಡಿದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ನಂತರ ಇಡೀ ದೇಶದ ಗಮನ ಸೆಳೆಯಿತು. ಸೌಜನ್ಯ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಯಲಿ ಎಂದು ವಿಪಕ್ಷಗಳು ಹೇಳಿದಾಗ ನಾವು ಅದನ್ನು ಗೌರವಿಸಿದೆವು. ಆದರೆ ನ್ಯಾಯಾಲಯ ಹಾಗೂ ಸಿಬಿಐ ಅಂತಿಮ ತೀರ್ಪು ನೀಡಿದಾಗ ಏನೂ ಇಲ್ಲ ಎಂದು ತಿಳಿಯಿತು” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

