

ಬಳ್ಳಾರಿ: ಕಂಪ್ಲಿ ತುಂಗಭದ್ರಾ ಜಲಾಶಯ ತುಂಬಿ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ, ಕಂಪ್ಲಿ-ಕೋಟೆ ಸಮೀಪದ ನದಿ ತೀರದಲ್ಲಿರುವ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹರಗೋಲುಗಳಲ್ಲಿ ಶವಗಳನ್ನು ಹೊತ್ತು, ಪ್ರವಾಹದ ನೀರಿನಲ್ಲೇ ಹರಸಾಹಸ ಮಾಡುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ವರ್ಷ ಜಲಾಶಯ ಭರ್ತಿಯಾಗಿ ಪ್ರವಾಹ ಬಂದಾಗಲೆಲ್ಲಾ ಈ ಸ್ಮಶಾನ ರಸ್ತೆ ಮುಳುಗುವುದು ಸಾಮಾನ್ಯವಾಗಿದೆ. ಆದರೂ, ದಶಕಗಳಿಂದಲೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿವೆ. ಬದುಕಿದ್ದಾಗ ಜನರ ಸಂಕಷ್ಟಗಳಿಗೆ ಕಿವಿಯಾಗಬೇಕಾದ ಸರ್ಕಾರ, ಮನುಷ್ಯ ಸತ್ತ ನಂತರವೂ ನೆಮ್ಮದಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ.
ಸಮಸ್ಯೆಗಳ ಆಗರ:
ಕೋಟೆ ಮತ್ತು ಪಟ್ಟಣದ ಅನೇಕ ಸಮುದಾಯಗಳ ಜನರಿಗೆ ಮೃತರ ಅಂತ್ಯಸಂಸ್ಕಾರ ಮಾಡುವುದು ಪ್ರತಿ ಪ್ರವಾಹ ಕಾಲದಲ್ಲಿ ಒಂದು ದೊಡ್ಡ ಸವಾಲಾಗಿದೆ. ಅಗ್ನಿಸಂಸ್ಕಾರ ಮಾಡುವವರು ಹೇಗೋ ಹರಗೋಲು ಬಳಸಿ ನೀರಿನಲ್ಲೇ ಕಟ್ಟಿಗೆ ಮತ್ತು ಶವವನ್ನು ಹೊತ್ತು ತಂದು ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ, ಮೃತದೇಹಗಳನ್ನು ಹೂಳಬೇಕಾದವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕುಣಿ ತೋಡಿದರೆ ನೀರು ನಿಲ್ಲುವುದರಿಂದ ಹೆಣ ಹೂಳುವುದು ಅಸಾಧ್ಯವಾಗಿದೆ. “ನಮ್ಮ ಪಟ್ಟಣಕ್ಕೆ ಪ್ರವಾಹ ಬಂದಾಗ, ‘ಸ್ಮಶಾನಕ್ಕೆ ದಾರಿ ಯಾವುದಯ್ಯ?’ ಎಂಬ ಪ್ರಶ್ನೆ ಕಾಡುತ್ತಿದೆ” ಎಂದು ಸ್ಥಳೀಯರೊಬ್ಬರು ನೋವಿನಿಂದ ಹೇಳಿಕೊಂಡಿದ್ದಾರೆ.
ಸ್ಮಶಾನಕ್ಕೆ ಸಮರ್ಪಕ ರಸ್ತೆ, ಭದ್ರವಾದ ಸೇತುವೆ ಅಥವಾ ಮೇಲ್ಸೇತುವೆಯಂತಹ ಮೂಲಸೌಕರ್ಯ ಕಲ್ಪಿಸದ ಸರ್ಕಾರದ ಈ ನಿರ್ಲಕ್ಷ್ಯ, ಮಾನವೀಯತೆಯ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ. ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಬದುಕುಳಿದವರ ನೋವು ಸಾಲದೆಂಬಂತೆ, ಮೃತರ ಕುಟುಂಬಸ್ಥರೂ ಇಂತಹ ಮಾನಸಿಕ ಯಾತನೆ ಅನುಭವಿಸುವುದು ನಿಜಕ್ಕೂ ದುರಂತ. ಜನರ ಈ ಮೂಲಭೂತ ಅವಶ್ಯಕತೆಯನ್ನು ಪರಿಗಣಿಸಿ, ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

