
ಹಗರಿಬೊಮ್ಮನಹಳ್ಳಿ: ಯೂರಿಯಾ ಗೊಬ್ಬರಕ್ಕೆ ತಾಲೂಕಿನಾದ್ಯಂತ ರೈತರು ಪರದಾಡುತ್ತಿದ್ದು, ಹಳೇ ಊರಿನ ಸೊಸೈಟಿಗೆ ಬರಬೇಕಿದ್ದ 20 ಟನ್ ಗೊಬ್ಬರ ಬಾರದಿರುವುದು ಸೋಮವಾರ ರೈತರ ಆಕ್ರೋಶಕ್ಕೆ ಕಾರಣವಾಯಿತು. ಸಿಟ್ಟಿಗೆದ್ದ ರೈತರು ಹರಿಹರ-ಹೊಸಪೇಟೆ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಘಟನೆ ವಿವರ
ಬೆಳಗ್ಗೆ 4-5 ಗಂಟೆಯಿಂದಲೇ ರೈತರು, ವಿಶೇಷವಾಗಿ ಮಹಿಳೆಯರು, ರಸಗೊಬ್ಬರ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಗೊಬ್ಬರ ಬರಲಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರೈತರು ಆಕ್ರೋಶಗೊಂಡರು. ಸೊಸೈಟಿ ಬಳಿಯ ಮುಖ್ಯ ರಸ್ತೆಯನ್ನು ತಡೆದು ಧರಣಿ ಆರಂಭಿಸಿದರು. ಇದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಧ್ಯ ಪ್ರವೇಶಿಸಿ ರೈತರ ಮನವೊಲಿಸಿ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.
ಅಧಿಕಾರಿಗಳ ಪ್ರತಿಕ್ರಿಯೆ
ಎಡಿ ಸುನೀಲ ನಾಯ್ಕ್ ಪ್ರತಿಕ್ರಿಯಿಸಿ, “ಸಣ್ಣ ಮತ್ತು ದೊಡ್ಡ ರೈತರು ತಾಳ್ಮೆಯಿಂದ ವರ್ತಿಸಿದರೆ ಎಲ್ಲರಿಗೂ ಯೂರಿಯಾ ದೊರೆಯುತ್ತದೆ. ಕೇವಲ ಅಂಗಡಿಗಳ ಮುಂದೆ ಜಮಾಯಿಸಿ ಗಲಾಟೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ದಾಖಲೆಗಳನ್ನು (ಪಹಣಿ, ಆಧಾರ್) ತಂದರೆ ಪಾರದರ್ಶಕವಾಗಿ ವಿತರಣೆ ಮಾಡಬಹುದು ಎಂದು ನಾವು ಹಲವಾರು ದಿನಗಳಿಂದ ಹೇಳುತ್ತಿದ್ದರೂ ಯಾರೂ ಸಹಕರಿಸುತ್ತಿಲ್ಲ” ಎಂದು ಹೇಳಿದರು.
“ಇಂದು ಎರಡು ಅಂಗಡಿಗಳಿಗೆ ಬಂದಿದ್ದ 460 ಚೀಲ ಯೂರಿಯಾವನ್ನು ತಲಾ ಒಂದರಂತೆ ವಿತರಿಸಲಾಗಿದೆ. ನಾಳೆ ಮತ್ತೆ ಸ್ಟಾಕ್ ಬರುತ್ತದೆ, ಅದನ್ನು ಸಮರ್ಪಕವಾಗಿ ವಿತರಿಸಲಾಗುವುದು” ಎಂದು ಅವರು ಭರವಸೆ ನೀಡಿದರು.
ರೈತರಿಗೆ ಮೊದಲೇ ಮಾಹಿತಿ ನೀಡಬೇಕಿತ್ತು ಎಂದು ತಿಳಿಸಿದ ಎಡಿ, ರೈತರು ಬೆಳಗ್ಗೆಯಿಂದಲೇ ಜಮಾಯಿಸಿದ್ದನ್ನು ಕಂಡರೂ ಸೊಸೈಟಿ ಅಧಿಕಾರಿಗಳು ಗೊಬ್ಬರ ಬಾರದಿರುವ ವಿಷಯ ತಿಳಿಸಿಲ್ಲ ಎಂದರು. ಪಟ್ಟಣದ ಸೊಸೈಟಿಗೆ 20 ಟನ್, ಶಿವ ಟ್ರೇಡರ್ಸ್‌ಗೆ 10 ಟನ್, ಮತ್ತು ತಂಬ್ರಹಳ್ಳಿ ಸೇರಿದಂತೆ ಬ್ಯಾಸಿಗದೇರಿಗೆ 30-40 ಟನ್ ಯೂರಿಯಾ ಬರಲಿದೆ ಎಂದು ಅವರು ಮಾಹಿತಿ ನೀಡಿದರು. ರೈತರು ಸಹಕರಿಸುವಂತೆ ಅವರು ಮನವಿ ಮಾಡಿದರು.
ರೈತರು ಪ್ರತಿಭಟಿಸುತ್ತಿರುವಾಗಲೇ ದೂರವಾಣಿ ಮೂಲಕ ಎಡಿ ಅವರಿಗೆ ಮಾಹಿತಿ ನೀಡಿದ ಪೊಲೀಸರು, ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ರೈತರು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಕೆಲ ದಿನಗಳ ಹಿಂದೆ ಶಿವ ಟ್ರೇಡರ್ಸ್ ಮುಂಭಾಗದಲ್ಲಿಯೂ ಟೋಕನ್‌ಗಾಗಿ ನೂಕುನುಗ್ಗಲು ಏರ್ಪಟ್ಟಿತ್ತು.

