

ಧಾರವಾಡ: ದೇಶದ ಉಜ್ವಲ ಭವಿಷ್ಯವು ಮಕ್ಕಳ ಮೇಲೆ ಅವಲಂಬಿತವಾಗಿದೆ. ಮಕ್ಕಳೇ ಈ ದೇಶದ ನಿಜವಾದ ಸಂಪತ್ತು. ಬಸವಾದಿ ಶರಣರು ಮತ್ತು ಶರಣೆಯರ ಪ್ರತಿಯೊಂದು ವಚನಗಳಲ್ಲಿ ಜೀವನ ಮೌಲ್ಯಗಳ ತುಡಿತ ಅಡಗಿದೆ. ಆದ್ದರಿಂದ, ಪಾಲಕರು ಮಕ್ಕಳಿಗೆ ಶರಣರ ನಡೆ-ನುಡಿಗಳನ್ನು ಪರಿಪಾಲಿಸುವಂತೆ ಪ್ರೋತ್ಸಾಹಿಸಬೇಕು. ಆಗಲೇ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಕೆ. ಎಚ್. ನಾಯಕ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ರಂಗ ಸಾಮ್ರಾಟ ಸಾಂಸ್ಕೃತಿಕ, ಶಿಕ್ಷಣ, ಕ್ರೀಡಾ ಸಂಶೋಧನಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾಲ ಬಸವ ಪ್ರಶಸ್ತಿ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು, ಪಾಲಕರು ಹಾಗೂ ಸಮಾಜದ ಪಾತ್ರ ಮಹತ್ವದ್ದು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಾಲ್ಯದಿಂದಲೇ ಒಳ್ಳೆಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಬೇಕು. ಮಕ್ಕಳು ಶರಣ ಸಂಸ್ಕೃತಿಯ ಮಹತ್ತರವಾದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ. ಸಂಸ್ಥೆಯ ನಿರ್ದೇಶಕರಾದ ಸಿಕಂದರ ದಂಡಿನ ಅವರು ಹಲವು ವರ್ಷಗಳಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ನಾಯಕ ಅವರು ಶ್ಲಾಘಿಸಿದರು.
‘ಸಂಸ್ಕಾರ ಬಿತ್ತಿದರೆ ಶ್ರೇಷ್ಠ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ’
ರಂಗ ಸಾಮ್ರಾಟ ಅಭಿನಯ ಶಾಲೆಯ ನಿರ್ದೇಶಕ ಸಿಕಂದರ ದಂಡಿನ ಮಾತನಾಡಿ, ತಮ್ಮ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಮಕ್ಕಳ ಮನೋವಿಕಾಸಕ್ಕಾಗಿ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ನಮ್ಮ ಮುಖ್ಯ ಗುರಿ. ಮಕ್ಕಳ ಮನಸ್ಸು ಹಸಿಗೋಡೆಯಿದ್ದಂತೆ, ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ಬಿತ್ತಿದರೆ, ಅವರು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ದೇಶದ ಭವಿಷ್ಯ ಅಡಗಿರುವುದೇ ತರಗತಿಯ ಕೋಣೆಯಲ್ಲಿ. ಮಕ್ಕಳು ಈ ದೇಶದ ಭಾಗ್ಯೋದಯದ ಶಿಲ್ಪಿಗಳು. ಎಳೆಯ ವಯಸ್ಸಿನಲ್ಲಿ ಅವರಿಗೆ ಒಳ್ಳೆಯ ಆಚಾರ-ವಿಚಾರಗಳನ್ನು, ಸಂಸ್ಕಾರವನ್ನು ಕಲಿಸಿದರೆ, ದೇಶಕ್ಕೆ ಭರವಸೆಯ ವ್ಯಕ್ತಿಗಳಾಗಲು ಸಾಧ್ಯ ಎಂದು ತಿಳಿಸಿದರು.
ಬಾಲ ಬಸವ ಹಾಗೂ ರಂಗ ಸಾಮ್ರಾಟ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ೨೦೨೫ನೇ ಸಾಲಿನ ಬಾಲ ಬಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅಯನ ಪಿ., ಆಶ್ನಲೇನ ಪಿರೇರಾ, ಪ್ರಣವ ಶಿವರಂಜನ್ ಸತ್ಯಂಪೇಟೆ, ಕೃಷ್ನಂ ಪ್ರಿಯಾ ಬದಿ, ಆರುಷಿ ಬಸವರಾಜ ಜವಳಿ, ವಿಧಿತ್ ಅನೂಪ್ ಬ್ಯಾಡಗಿ, ಆಕರ್ಷ ಜಿ, ಶ್ರೀನಿಧಿ ಜಕ್ಕಣ್ಣವರ, ಸಹನಾ ಯಡ್ರಾವಿ, ಲತೀಕಾ ಯರಗಟ್ಟಿ, ಅಂಜಲಿ ಚಕ್ರಸಾಲಿ, ಪೂರ್ವಿ ಹಲಗಿ, ಶ್ರೀನಿಧಿ ಗಾಣಿಗೇರ, ಚಿರಂತನರಾಜ ಬಾಸುರ್, ಶಿವುಕುಮಾರ ನರಗುಂದ, ಶ್ರೀವತ್ಸ ಸೋಮನಖೋಟ್, ಆರಾಧ್ಯ ಪಾಟೀಲ, ವಿಭಾ ನಾಯಕ, ಹಾಗೂ ಶ್ರೀಕಾ ನಾಯಕ ಅವರು ಪ್ರಶಸ್ತಿ ಸ್ವೀಕರಿಸಿದರು.
ನಂತರದಲ್ಲಿ, ಅಂತರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಪಟು ಪ್ರಮೋದಗೌಡ ದ್ಯಾಪುರ ಅವರಿಗೆ ರಂಗ ಸಾಮ್ರಾಟ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕರಾದ ಶಿವಾನಂದ ನಾಗೂರ ಉಪಸ್ಥಿತರಿದ್ದು ಮಾತನಾಡಿದರು. ಯಲ್ಲಪ್ಪ ಬೆಂಡಿಗೇರಿ ಅವರು ‘ಆಕ್ರಂದನ’ ಗೀತೆಗೆ ಚಾಲನೆ ನೀಡಿದರು. ಅತಿಥಿಗಳಾಗಿ ಪ್ರಮೀಳಾ ಜಕ್ಕಣ್ಣವರ ಆಗಮಿಸಿದ್ದರು.
ಶ್ರುತಿ ಹುರಳಿಕೊಪ್ಪ ಸ್ವಾಗತಿಸಿದರೆ, ವಿ. ಎನ್. ಕೀರ್ತಿವತಿ ಕಾರ್ಯಕ್ರಮ ನಿರೂಪಿಸಿದರು. ಚಿದಾನಂದ ಭಜಂತ್ರಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಚಿದಾನಂದ ಭಜಂತ್ರಿ, ಶಿವಾನಂದ ಭಜಂತ್ರಿ, ಎನ್. ಬಿ. ದ್ಯಾಪುರ, ರಾಮ್ ಪಟವರ್ಧನ, ಪ್ರಿಯಾಂಕಾ ಕೆ ಮುಂತಾದವರು ಉಪಸ್ಥಿತರಿದ್ದರು.

