
ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಕೆಲವು ಬೆಳವಣಿಗೆಗಳು ಮಾತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಲುಪುತ್ತಿವೆ. ಮತ್ತೆ ಕೆಲವು ಅವರಿಗೆ ತಲುಪುವುದಿಲ್ಲ. ಆದ್ದರಿಂದ, ಎಲ್ಲ ವಿಚಾರಗಳನ್ನೂ ಹೈಕಮಾಂಡ್ಗೆ ತಲುಪಿಸುವ ಕೆಲಸ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಜಮಖಂಡಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಆರೆಸ್ಸೆಸ್ ಗೀತೆ ಹಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಉತ್ತರಿಸಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಚರ್ಚೆ ಮಾಡಬೇಕು. ಇದು ನಮ್ಮ ಮಟ್ಟದಲ್ಲಿ ಚರ್ಚೆ ಮಾಡುವ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು. “ರಾಜ್ಯದಲ್ಲಿ ಏನು ನಡೆಯುತ್ತದೆ ಎಂಬುದು ಹೈಕಮಾಂಡ್ ಗಮನಕ್ಕೆ ಬರುವುದಿಲ್ಲ. ಕೆಲವು ವಿಷಯಗಳು ಮಾತ್ರ ರಾಹುಲ್ ಗಾಂಧಿ ಅವರಿಗೆ ತಲುಪುತ್ತವೆ, ಮತ್ತೆ ಕೆಲವು ತಲುಪುವುದೇ ಇಲ್ಲ. ಎಲ್ಲ ವಿಷಯಗಳನ್ನು ಮುಟ್ಟಿಸುವ ಕೆಲಸ ಆಗಬೇಕು” ಎಂದು ಅವರು ಹೇಳಿದರು.
ರಾಜಣ್ಣ ಹೇಳಿಕೆ ತಿರುಚಿ ವರಿಷ್ಠರಿಗೆ ಹೇಳಿದ್ದಾರೆ’
ಮಾಜಿ ಸಚಿವ ರಾಜಣ್ಣ ಹೇಳಿಕೆಯನ್ನು ತಿರುಚಿ ಪಕ್ಷದ ಹೈಕಮಾಂಡ್ಗೆ ಹೇಳುವ ಪ್ರಯತ್ನ ನಡೆದಿದೆ. ಆದ್ದರಿಂದ ದೆಹಲಿಗೆ ಹೋಗಿ ಹೈಕಮಾಂಡ್ಗೆ ಮನವರಿಕೆ ಮಾಡಬೇಕು. “ಡಿ.ಕೆ. ಶಿವಕುಮಾರ್ ಬಗ್ಗೆ ಹೈಕಮಾಂಡ್ ಮೃದು ಧೋರಣೆ ತಾಳಿದೆ. ನಮಗೊಂದು ನ್ಯಾಯ, ಅವರಿಗೊಂದು ನ್ಯಾಯವೇ?” ಎಂದು ರಾಜಣ್ಣ ಪ್ರಶ್ನಿಸಿದ್ದಾರೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದೆಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಜಾರಕಿಹೊಳಿ ತಿಳಿಸಿದರು.
ರಾಜಣ್ಣ ವಿಷಯದಲ್ಲಿ ಪಕ್ಷದ ವರಿಷ್ಠರ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ವತಃ ರಾಜಣ್ಣ ಅವರೇ ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

