
ಕುಂದಗೋಳ: ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಹೆಬಸೂರ ಹೇಳಿದರು.
ಪಟ್ಟಣದ ಕಲ್ಯಾಣಪುರ ಮಠದಲ್ಲಿ ಮಂಗಳವಾರ ಏಕತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾಡಿನ ಪಂಚಪೀಠ ಶ್ರೀಗಳು, ವಿರಕ್ತ ಮಠಗಳ ಶ್ರೀಗಳು ಹಾಗೂ ಜಗದ್ಗುರುಗಳು ಈ ಸಮಾವೇಶದಲ್ಲಿ ಭಾಗವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಸಾವಿರಾರು ಶ್ರೀಗಳು ಸಮಾವೇಶಕ್ಕೆ ಆಗಮಿಸಲಿದ್ದು, ಮಹಾರಾಷ್ಟ್ರದಿಂದ ಸುಮಾರು 135ಕ್ಕೂ ಹೆಚ್ಚು ಶ್ರೀಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಮುಖಂಡ ಎ.ಬಿ. ಉಪ್ಪಿನ ಮಾತನಾಡಿ, ಸಮಾವೇಶಕ್ಕೆ ಆಗಮಿಸುವ ಭಕ್ತ ಸಮೂಹಕ್ಕೆ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿದರು.
ಕಲ್ಯಾಣಪುರದ ಬಸವಣ್ಣಜ್ಜನವರು ಸಭೆಯ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಇಂಗಳಳ್ಳಿ, ವೀರಯ್ಯ ನಾಗಾವಿಮಠ, ಸೋಮಣ್ಣ ಮೇಟಿ, ಬಸಲಿಂಗಪ್ಪ ಕೋರಿ, ವಿಧ್ಯಾಧರ ಸುಂಕದ, ಗಂಗಾಧರ ಕೋಳಿವಾಡ, ಎಸ್.ಎಸ್. ನಾಗಶೆಟ್ಟಿ, ಚನ್ನವೀರಪ್ಪ ರಡ್ಡೇರ, ಉಮೇಶ ಪಲ್ಲೇದ, ಶಿವಾನಂದ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

