ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವವರು, ದುಡ್ಡು ತಗೊಂಡು ಮತ ಹಾಕುವವರು ಇರುವವರೆಗೆ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದು ನಿರೀಕ್ಷಿಸುವುದು ತಪ್ಪು’: ಸಭಾಪತಿ ಹೊರಟ್ಟಿ ವಿಷಾದ

Spread the love

ಧಾರವಾಡ: ಬೆಳಗಾವಿಯಲ್ಲಿ ಡಿಸೆಂಬರ್‌ ೮ರಿಂದ ಚಳಿಗಾಲದ ಅಧಿವೇಶನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆದಿದ್ದು, ಮುಂದಿನ ವಾರ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು. ಆದರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಲ್ಲಿ ಗಂಭೀರತೆ ಇಲ್ಲ ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು.

​ಧಾರವಾಡದಲ್ಲಿ ಶನಿವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಾಸಕರು ಈ ಭಾಗದ ಅಭಿವೃದ್ಧಿ ಬಗ್ಗೆ ಮಾತನಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ, ದಕ್ಷಿಣ ಕರ್ನಾಟಕದ ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ ಮಾತನಾಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿ ಬುಧವಾರ ಮತ್ತು ಗುರುವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ಪರಿಷತ್ ಸದಸ್ಯರಿಗೆ ಸರ್ಕ್ಯೂಲರ್‌ ರವಾನೆ:

ಈ ಬಾರಿ ಉತ್ತರ ಕರ್ನಾಟಕದ ಚರ್ಚೆಯ ಬಗ್ಗೆ ನಿರ್ಲಕ್ಷ್ಯವಾಗದಂತೆ ನೋಡಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ನಾನು ಶಾಸಕರುಗಳಿಗೆ ಎರಡು ದಿನಗಳಲ್ಲಿ ಸುತ್ತೋಲೆ (ಸರ್ಕ್ಯೂಲರ್) ಕಳಿಸುತ್ತೇನೆ. ಆ ಬಳಿಕ ಮಾಧ್ಯಮಗಳಿಗೆ ಪ್ರಕಟಣೆಯನ್ನೂ ಬಿಡುಗಡೆ ಮಾಡುತ್ತೇನೆ. ವಿಧಾನ ಪರಿಷತ್ ಸದಸ್ಯರುಗಳಿಗೂ ಈ ಕುರಿತು ಲಿಖಿತವಾಗಿ ಬರೆದುಕೊಡುತ್ತೇನೆ ಎಂದು ಹೊರಟ್ಟಿ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿನ ಲೋಪ:

ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಾತನಾಡಿದ ಸಭಾಪತಿಗಳು, “ಎಲ್ಲಿಯವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವವರು, ದುಡ್ಡು ತಗೊಂಡು ಮತ ಹಾಕುವವರು ಇರುತ್ತಾರೋ ಅಲ್ಲಿಯವರೆಗೂ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಕಾಲ ಸುಧಾರಣೆಯಾಗಬೇಕಿದೆ. ಆದರೆ, ನಮ್ಮಿಂದ ಸುಧಾರಣೆ ಆಗುವುದಿಲ್ಲ. ಪ್ರಶ್ನೆ ಕೇಳಿದ ಶಾಸಕರೇ ಒಂದು ನಿಮಿಷದಲ್ಲಿ ಓಡಿ ಹೋಗುತ್ತಾರೆ. ಸದ್ಯ ಅಭಿವೃದ್ಧಿಯ ವಿಷಯದಲ್ಲಿ ಬಹಳ ಕಷ್ಟದ ಕೆಲಸವಿದೆ,” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ಮತ್ತು ವಿನಾಕಾರಣ ಚರ್ಚೆ:

ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತು ಕೇಳಿದಾಗ, “ಅದು ನವೆಂಬರ್ ಕ್ರಾಂತಿಯೋ, ಡಿಸೆಂಬರ್ ಕ್ರಾಂತಿಯೋ, ಕ್ರಾಂತಿ ಮಾಡುವವರು, ಕ್ರಾಂತಿ ಮಾಡಿಸಿಕೊಳ್ಳುವವರು ಅಲ್ಲೇ ಇದ್ದಾರೆ. ಕಣ್ಣಿನಿಂದ ನೋಡಿಕೊಂಡು ಹೋಗುವುದು ಅಷ್ಟೇ ನಮ್ಮ ಕೆಲಸ. ಈ ನಡೆಯು ನಮಗೂ ಸರಿ ಅನಿಸುತ್ತಿಲ್ಲ. ದಿನನಿತ್ಯ ಮಾಧ್ಯಮಗಳಲ್ಲಿ ಅವರದ್ದೇ ಕಾಣುತ್ತದೆ. ಗುರುತರ ಸಮಸ್ಯೆಗಳನ್ನು ಬಿಟ್ಟು ಬರೀ ಅವರದ್ದೇ ಚರ್ಚೆ ನಡೆದಿದೆ. ಯಾರೇ ಇರಲಿ, ವಿನಾಕಾರಣ ಚರ್ಚೆ ಮಾಡಬಾರದು. ರಾಜ್ಯದ ಜನರ ಪರವಾಗಿ ಬೇಕಾದಷ್ಟು ಕೆಲಸಗಳಿವೆ, ಅದರ ಬಗ್ಗೆ ಮಾತನಾಡಲಿ. ಸಭಾಪತಿಯಾಗಿ ಇದನ್ನು ಹೇಳುವುದು ನನ್ನ ಕರ್ತವ್ಯ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ವರ್ತನೆಗೆ ಬೇಸರ:

ಪ್ರತಾಪ ಸಿಂಹ ಮತ್ತು ಪ್ರದೀಪ ಈಶ್ವರ ಅವರ ನಿಂದನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, “ಮನುಷ್ಯತ್ವ ಇದ್ದವರು ಇಂತಹ ಮಾತುಗಳನ್ನು ಮಾತಾಡುತ್ತಾರಾ? ಶಾಸಕರಾದವರು ಮಾದರಿಯಾಗಬೇಕು, ಏನು ಮಾತನಾಡಬೇಕು ಎಂಬುದನ್ನು ಕಲಿಯಬೇಕು. ಸಮಾಜದಲ್ಲಿ ಒಳ್ಳೆಯದನ್ನು ಮಾಡುವ ಒಂದು ಸೌಜನ್ಯ ಶಾಸಕರುಗಳಿಗಿಲ್ಲ,” ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *