ಆರೋಗ್ಯ ಸಂಜೀವಿನಿ ಯೋಜನೆ: ಜಿಲ್ಲೆಯ 18 ಆಸ್ಪತ್ರೆಗಳು ಸೇರ್ಪಡೆ; ಖಾಸಗಿ ಆಸ್ಪತ್ರೆಗಳ ಸಹಕಾರಕ್ಕೆ ಡಿಸಿ ಮನವಿ

Spread the love

ಧಾರವಾಡ, ಡಿ. 11: ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಗೆ ಧಾರವಾಡ ಜಿಲ್ಲೆಯ 18 ಆಸ್ಪತ್ರೆಗಳು ಸೇರ್ಪಡೆಯಾಗಿವೆ. ಈ ಪೈಕಿ 16 ಆಸ್ಪತ್ರೆಗಳು ಈಗಾಗಲೇ ನೋಂದಣಿಯಾಗಿದ್ದು, ಹುಬ್ಬಳ್ಳಿ ಮತ್ತು ಧಾರವಾಡದ ತಲಾ ಒಂದು ಆಸ್ಪತ್ರೆಗಳು ಒಪ್ಪಂದದ (MoU) ಹಂತದಲ್ಲಿವೆ. ಈ ಮಹತ್ವದ ಯೋಜನೆಯನ್ನು ಯಶಸ್ವಿಗೊಳಿಸಲು ಅವಳಿ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳು ಸ್ವಯಂ ಪ್ರೇರಣೆಯಿಂದ ನೋಂದಣಿಯಾಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮನವಿ ಮಾಡಿದ್ದಾರೆ.

​ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗುರುವಾರದಂದು (ಡಿ. 10) ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಪ್ರಮುಖ ಆಸ್ಪತ್ರೆಗಳ ವೈದ್ಯರು ಹಾಗೂ ಮುಖ್ಯಸ್ಥರ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸುಮಾರು 23 ಸಾವಿರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ಸುರಕ್ಷತೆಯು ಉತ್ತಮ ಆಡಳಿತದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ತಿಳಿಸಿದರು.

​ವಿಳಂಬ ಧೋರಣೆಗೆ ಅಸಮಾಧಾನ

​ಯೋಜನೆಯ ಕುರಿತು ಈಗಾಗಲೇ ಹಲವು ಬಾರಿ ಸಭೆ ನಡೆಸಿ ತಿಳುವಳಿಕೆ ನೀಡಿದ್ದರೂ, ಧಾರವಾಡದ ಕೆಲವು ಪ್ರಮುಖ ಆಸ್ಪತ್ರೆಗಳು ಯೋಜನೆಗೆ ಒಳಪಡಲು ವಿಳಂಬ ಮಾಡುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಸಿಬ್ಬಂದಿಗಳಿಗೆ ಆರೋಗ್ಯ ಸುರಕ್ಷತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಆಸ್ಪತ್ರೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಈಗಾಗಲೇ ನೋಂದಣಿಯಾದ ಆಸ್ಪತ್ರೆಗಳು

​ಹುಬ್ಬಳ್ಳಿಯ ಅಶೋಕ ಆಸ್ಪತ್ರೆ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಸಂಜೀವಿನಿ ಸ್ಪೆಶಾಲಿಟಿ ಆಸ್ಪತ್ರೆ, ಶಿವಕೃಪಾ, ಸುಚಿರಾಯು, ಮಾನಸಾ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಟ್, ವಿ-ಕೇರ್, ತತ್ತ್ವದರ್ಶಿ, ಜಯಪ್ರಿಯಾ, ಎಚ್.ಸಿ.ಜಿ. ಎನ್‍ಎಮ್‍ಆರ್ ಕ್ಯೂರ್ ಸೆಂಟರ್, ಶ್ರೀ ಬಾಲಾಜಿ ಇನಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸ್, ವಿವೇಕಾನಂದ ಜನರಲ್ ಆಸ್ಪತ್ರೆ, ಸೆಕ್ಯೂರ್ ಹಾಗೂ ವಿಹಾನ್ ಆಸ್ಪತ್ರೆಗಳು ಈಗಾಗಲೇ ನೋಂದಣಿಯಾಗಿದ್ದು, ಈ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಧಾರವಾಡದ ಯುನಿಟಿ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗಳು ಸೇರ್ಪಡೆಗೆ ಒಪ್ಪಿಗೆ ಸೂಚಿಸಿ ಪ್ರಸ್ತಾವನೆ ಸಲ್ಲಿಸಿವೆ.

​ನೋಂದಣಿಗೆ ಬಾಕಿ ಇರುವ ಪ್ರಮುಖ ಆಸ್ಪತ್ರೆಗಳು

​ಧಾರವಾಡದ ಎಸ್‌ಡಿಎಂ ಆಸ್ಪತ್ರೆ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ (ಧಾರವಾಡ ಶಾಖೆ), ತಾವರಗೇರಿ ನರ್ಸಿಂಗ್ ಹೋಮ್, ವಿಠ್ಠಲ ಚಿಕ್ಕಮಕ್ಕಳ ಆಸ್ಪತ್ರೆ, ಡಾ. ಎಸ್.ಆರ್. ರಾಮನಗೌಡರ ಆಸ್ಪತ್ರೆ, ಶ್ರವ್ಯಾ ಆಸ್ಪತ್ರೆ, ಎಸ್‌ಡಿಎಂ ನಾರಾಯಣ ಹೃದಯಾಲಯ, ಚಿರಾಯು ಮಲ್ಟಿಸ್ಪೆಶಾಲಿಟಿ, ವಾಸನ್ ಐ ಕೇರ್, ಎಸ್‌ಡಿಎಂ ಡೆಂಟಲ್, ನಿರ್ಮಲಾ ಆಸ್ಪತ್ರೆ, ನವಸ್ಪಂದನ, ಶ್ರೇಯಾ ಹಾಗೂ ಹುಬ್ಬಳ್ಳಿಯ ಶುಶ್ರೂತ, ಸಿಟಿ ಕ್ಲಿನಿಕ್, ರೆಡಾನ್ ಮತ್ತು ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆಗಳು ಶೀಘ್ರವೇ ನೋಂದಣಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಆಶಯ ವ್ಯಕ್ತಪಡಿಸಿದರು.

​ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಅವರು ಯೋಜನೆಯ ತಾಂತ್ರಿಕ ಅಂಶಗಳ ಕುರಿತು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *