
ಬೆಂಗಳೂರು (ಸೆ.19): ಉದ್ಯಮಿಗಳಿಗೆ ಬೆದರಿಕೆ ಹಾಕಿ ಬೆಂಗಳೂರು ತೊರೆಯುವಂತೆ ಮಾಡುವುದಕ್ಕಾಗಿಯೇ ಉಪಮುಖ್ಯಮಂತ್ರಿಯಾಗಿದ್ದೀರಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿರುವ ಉದ್ಯಮಿಗಳಿಗೆ ಆತ್ಮವಿಶ್ವಾಸ ತುಂಬುವ ಬದಲು ಧಮ್ಕಿ ಹಾಕುವ ಪ್ರವೃತ್ತಿಯನ್ನು ಬದಲಿಸಿಕೊಳ್ಳಿ ಎಂದು ಕಿಡಿಕಾರಿದರು.
ತೆರಿಗೆ ನೀಡಿದರೂ ಸೌಲಭ್ಯಗಳಿಲ್ಲ
ಉಪಮುಖ್ಯಮಂತ್ರಿಗಳೇ, ಬೆಂಗಳೂರಿನ ನಾಗರಿಕರ ಕೊಡುಗೆ ರಾಜ್ಯಕ್ಕೆ ಸಾಕಷ್ಟಿದೆ. ಆದರೆ ಅವರಿಗೆ ನೀವು ಕೊಡುತ್ತಿರುವ ಮೂಲಭೂತ ಸೌಕರ್ಯಗಳಾದರೂ ಏನು? ನೀರು, ಹಾಲು, ಮೆಟ್ರೋ ದರ ಹೆಚ್ಚಳವಲ್ಲದೆ ಆಸ್ತಿ ತೆರಿಗೆ ಮತ್ತು ಕಸದ ಸೆಸ್ ಹೊರೆ ಹೊರಿಸಿರುವ ರಾಜ್ಯ ಸರ್ಕಾರ ಯಾವ ಸೌಕರ್ಯಗಳನ್ನು ಕಲ್ಪಿಸಿದೆ? ಎಂದು ನಿಖಿಲ್ ಪ್ರಶ್ನಿಸಿದರು.
ನಗರದಲ್ಲಿ ರಸ್ತೆಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಪ್ರತಿ ವಾರ್ಡ್‌ನಲ್ಲಿ ಘನತ್ಯಾಜ್ಯ ಸರಿಯಾಗಿ ವಿಲೇವಾರಿಯಾಗದೆ ಪರಿಸರ ಹಾಳಾಗುತ್ತಿದೆ. ರಾಜ್ಯಕ್ಕೆ ಶೇ.30ರಷ್ಟು ತೆರಿಗೆಯನ್ನು ನೀಡುತ್ತಿರುವ ಬೆಂಗಳೂರು ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯ ಏಕೆ ಕಲ್ಪಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಹೊರ ವರ್ತುಲ ರಸ್ತೆಯ ಬ್ಲಾಕ್‌ಬಗ್ ಕಂಪನಿಯ ಸಿಇಒ ಮೂಲ ಸೌಕರ್ಯಗಳ ಕೊರತೆಯಿಂದ ರಾಜ್ಯದಿಂದ ಹೊರ ಹೋಗುವ ಬಗ್ಗೆ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಆದರೂ ಬೆಂಗಳೂರು ಉಸ್ತುವಾರಿ ಹೊತ್ತಿರುವ ಡಿ.ಕೆ.ಶಿವಕುಮಾರ್ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಕಿಡಿ ಕಾರಿದರು.
ಬಂಡವಾಳ ಉಳಿಸಿಕೊಳ್ಳಲು ಪ್ರಯತ್ನವಿಲ್ಲ
ಬಂಡವಾಳ ಹೂಡಿಕೆಗೆ ಸರ್ಕಾರ ಯಾವ ಮೂಲ ಸೌಲಭ್ಯ ಕಲ್ಪಿಸಿದೆ? ನವೆಂಬರ್ ವೇಳೆಗೆ ರಸ್ತೆಗುಂಡಿ ಮುಚ್ಚುವ ಗಡುವು ನೀಡಿ ₹1,100 ಕೋಟಿ ಒದಗಿಸುವುದಾಗಿ ಹೇಳಿದ್ದಾರೆ. ಆದರೆ ಮೂಲ ಸೌಕರ್ಯವಿಲ್ಲದೆ ಉದ್ಯಮಗಳು ನೆರೆಹೊರೆಯ ರಾಜ್ಯಗಳಿಗೆ ಹೋದರೆ ತೆರಿಗೆ ನಷ್ಟ ಉಂಟಾಗಲಿದೆ. ಇರುವ ಕಂಪನಿಗಳನ್ನು ಉಳಿಸಿಕೊಂಡು ಹೊಸ ಕಂಪನಿಗಳನ್ನು ಕರೆತರುವ ಪ್ರಯತ್ನವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರದ ಕೊಡುಗೆ ಸ್ಮರಿಸಿದ ನಿಖಿಲ್
ಹಿಂದಿನ ಜೆಡಿಎಸ್ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಶ್ವೇತಪತ್ರ ಹೊರಡಿಸಲು ಸಿದ್ಧ ಎಂದು ನಿಖಿಲ್ ಸವಾಲು ಹಾಕಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಐಟಿ-ಬಿಟಿ ಉದ್ಯಮಕ್ಕೆ 10 ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಿ ಭದ್ರ ಬುನಾದಿ ಹಾಕಿದ್ದರು. ಮೈಸೂರು ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿ, ಪ್ರಧಾನಿಯಾಗಿ ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರು ಒದಗಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಬಿಎಂಪಿ ರಚಿಸಿದ್ದರು ಎಂಬುದನ್ನು ನೆನಪಿಸಿದರು. ಆದರೆ ಈಗ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ ಎಂದು ವ್ಯಂಗ್ಯವಾಡಿದರು.
ಜಾತಿ ಸಮೀಕ್ಷೆ ಬಗ್ಗೆಯೂ ಕಿಡಿ
ಕಾಂತರಾಜು ವರದಿ ಹಾಗೂ ಈಗ ನಡೆಯುತ್ತಿರುವ ಜಾತಿ ಸಮೀಕ್ಷೆ ಬಗ್ಗೆಯೂ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ₹180 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸಿದ್ದರೂ ವರದಿಯನ್ನು ತಿರಸ್ಕರಿಸಲಾಯಿತು. ಈಗ ಮತ್ತೆ ₹420 ಕೋಟಿ ವೆಚ್ಚದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. 331 ಜಾತಿಗಳನ್ನು ಸೇರಿಸಿದ್ದು ಯಾರ ಉದ್ದೇಶಕ್ಕೆ? ಬಡವರಿಗೆ ಅನುಕೂಲವಾಗಿದ್ದರೆ ನಾವು ಒಪ್ಪುತ್ತೇವೆ, ಆದರೆ ಇದರಲ್ಲಿ ರಾಜಕೀಯ ದುರುದ್ದೇಶ ಕಾಣುತ್ತಿದೆ ಎಂದು ಆರೋಪಿಸಿದರು. ‘ಸೂಪರ್ ಸಿಎಂ’ ಸುರ್ಜೇವಾಲಾ ಹೈಕಮಾಂಡ್ ಮೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಲ್ಲವೇ? ಎಂದು ನಿಖಿಲ್ ಪ್ರಶ್ನಿಸಿದರು.

