
ಬೆಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ₹4 ಲಕ್ಷದವರೆಗೂ ಹಣ ಪಡೆದಿರುವುದಾಗಿ ಮತ್ತು ಬೆದರಿಕೆ ಹಾಕಲಾಗಿತ್ತು ಎಂದು ಪ್ರಕರಣದ ದೂರುದಾರ ಚಿನ್ನಯ್ಯ ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆ ವೇಳೆ ಬಾಯ್ದಿಟ್ಟಿದ್ದಾನೆ. ಪ್ರಕರಣದ ಹಿಂದೆ ಹಣಕಾಸು ವ್ಯವಹಾರ ನಡೆದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹಂತ ಹಂತವಾಗಿ ಹಣ ನೀಡಿಕೆ
ಚಿನ್ನಯ್ಯನ ಪ್ರಕಾರ, ಪ್ರಕರಣದ ಬುರುಡೆ ಗ್ಯಾಂಗ್‌ನ ಸೂತ್ರಧಾರಿಗಳು ಈ ಕೃತ್ಯಕ್ಕಾಗಿ ಹಂತ ಹಂತವಾಗಿ ಹಣ ನೀಡಿದ್ದರು. “ಐದು-ಹತ್ತು ಸಾವಿರದಂತೆ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ಹಣ ನೀಡಲಾಯಿತು” ಎಂದು ಆತ ಹೇಳಿಕೆ ನೀಡಿದ್ದಾನೆ. ಆರಂಭದಲ್ಲಿ ಸಹಕಾರ ನೀಡಿದ ನಂತರ, ಪ್ರಕರಣದಿಂದ ದೂರವಾಗಲು ಬಯಸಿದಾಗ ಆರೋಪಿಗಳು ಬೆದರಿಕೆ ಹಾಕಿದರು. “ನನ್ನನ್ನು ಬಿಡುವುದಿಲ್ಲ, ಹೊಡೆದು ಮುಗಿಸುತ್ತಾರೆ. ನಿನಗೆ ಎಲ್ಲ ಗೊತ್ತಿದೆ, ನಾವು ಹೇಳಿದ ಹಾಗೆ ಕೇಳದಿದ್ದರೆ ನಿನ್ನ ವಿರುದ್ಧವೇ ಕೇಸ್ ಹಾಕಿ ಜೀವಾವಧಿ ಶಿಕ್ಷೆಯಾಗುವಂತೆ ಮಾಡುತ್ತೇವೆ ಎಂದು ಹೆದರಿಸಿದರು” ಎಂದು ಚಿನ್ನಯ್ಯ ಎಸ್ಐಟಿ ಮುಂದೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ.
ಬುರುಡೆ ತಿಮರೋಡಿ ತೋಟದಿಂದ ತಂದಿದ್ದು
ಪ್ರಕರಣದಲ್ಲಿ ದೊಡ್ಡ ಸದ್ದು ಮಾಡಿದ್ದ ತಲೆ ಬುರುಡೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ತೋಟದಿಂದ ತಂದಿರುವುದಾಗಿ ಚಿನ್ನಯ್ಯ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಬುರುಡೆಯ ಜೊತೆ ಇದ್ದ ಮಣ್ಣು ಮತ್ತು ಧರ್ಮಸ್ಥಳದ ಸುತ್ತಮುತ್ತಲಿನ ಮಣ್ಣು ಒಂದಕ್ಕೊಂದು ಸಾಮ್ಯತೆ ಇಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಎಫ್‌ಎಸ್‌ಎಲ್ ವರದಿ ಬಹಿರಂಗವಾದ ನಂತರ ಎಸ್ಐಟಿ ಪೊಲೀಸರು ಚಿನ್ನಯ್ಯನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಈ ಸತ್ಯ ಬಯಲಾಗಿದೆ.
ಪರೀಕ್ಷೆಗೆ ಮಣ್ಣಿನ ಮಾದರಿಗಳು
ಚಿನ್ನಯ್ಯನ ಹೇಳಿಕೆಯ ಮೇರೆಗೆ, ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಅವರ ರಬ್ಬರ್ ತೋಟಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ರಬ್ಬರ್ ತೋಟದ ಒಂದು ಜಾಗವನ್ನು ಗುರುತಿಸಿದ ಚಿನ್ನಯ್ಯ, ಅಲ್ಲಿಂದಲೇ ತಲೆ ಬುರುಡೆಯನ್ನು ತೆಗೆದಿರುವುದಾಗಿ ತಿಳಿಸಿದ್ದಾನೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಬುರುಡೆಯಲ್ಲಿದ್ದ ಮಣ್ಣಿನೊಂದಿಗೆ ಹೋಲಿಕೆ ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.
ತನಿಖೆಯ ಬಗ್ಗೆ ಪ್ರಶ್ನೆಗಳು
ಎಸ್ಐಟಿ ತನಿಖೆ ಆರಂಭವಾದಾಗಲೇ ಕೆಲವು ಕಾನೂನು ತಜ್ಞರು ತನಿಖೆಯ ರೀತಿಯನ್ನು ಪ್ರಶ್ನಿಸಿದ್ದರು. “ಬುರುಡೆ ಸಿಕ್ಕಿದ ಜಾಗವನ್ನು ಮೊದಲು ಗುರುತಿಸಿ ಶೋಧ ಕಾರ್ಯ ಆರಂಭಿಸಬೇಕಿತ್ತು. ಬುರುಡೆಯು ಸಿಕ್ಕಿದಲ್ಲಿ ಅದರ ಮೂಳೆಗಳು ಸಿಗುವ ಸಾಧ್ಯತೆಯಿರುತ್ತದೆ. ಆದರೆ, ಎಸ್ಐಟಿ ಬೇರೆ ಬೇರೆ ಜಾಗಗಳನ್ನು ಗುರುತಿಸಿದ್ದು ಸರಿಯಲ್ಲ” ಎಂದು ತಜ್ಞರು ಅಂದು ಅಭಿಪ್ರಾಯಪಟ್ಟಿದ್ದರು.

