
ವಿಜಯಪುರ: ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮೇಲೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದು, ಪ್ರಕರಣವು ಈಗ ಹನಿಟ್ರ್ಯಾಪ್ ಹಾಗೂ ಬ್ಲಾಕ್ಮೇಲ್ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲಾ ಆರೋಪಗಳನ್ನು ವ್ಯವಸ್ಥಿತ ಪಿತೂರಿ ಎಂದು ತಳ್ಳಿಹಾಕಿರುವ ಶ್ರೀಗಳು, ಈಗ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ಮೂಲದ ತ್ರಿವೇಣಿ ಎಂಬ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಶ್ರೀಗಳು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಬೆತ್ತಲೆ ವಿಡಿಯೋ ಕಾಲ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಸ್ವಾಮೀಜಿ, ಇದು ತಮ್ಮ ತೇಜೋವಧೆ ಮಾಡಲು ನಡೆಯುತ್ತಿರುವ ರಾಜಕೀಯ ಪ್ರೇರಿತ ಸಂಚು ಎಂದು ಕಿಡಿಕಾರಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ಬ್ಲಾಕ್ಮೇಲ್ ಆರೋಪ:
ಸ್ವಾಮೀಜಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸುಮಾರು 2-3 ವರ್ಷಗಳ ಹಿಂದೆ ತ್ರಿವೇಣಿ ಎಂಬಾಕೆ ತನ್ನ ಸಹೋದರರೊಂದಿಗೆ ಬಂದು ‘ಆಶ್ರಿತ (ಪ್ರಗತಿ) ಫೌಂಡೇಶನ್’ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಲಿಂಗಾಯತ ಸಮುದಾಯದವಳೆಂದು ಹೇಳಿ ನಂಬಿಸಿದ್ದ ಆಕೆ, ನಂತರ ತನ್ನ ಫೌಂಡೇಶನ್ಗೆ ಹಣ ನೀಡುವಂತೆ ಪೀಡಿಸಲು ಪ್ರಾರಂಭಿಸಿದಳು. ದಾನಿಗಳ ಮೂಲಕ ಸಹಾಯ ಮಾಡಿಸುವುದಾಗಿ ಶ್ರೀಗಳು ತಿಳಿಸಿದ್ದರೂ, ಆಕೆ ನಿರಂತರವಾಗಿ ಹಣಕ್ಕಾಗಿ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.
ಹಲ್ಲೆ ಮತ್ತು ಜೀವ ಬೆದರಿಕೆ:
ಕಳೆದ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಶ್ರೀಗಳು ಪ್ರಯಾಣಿಸುತ್ತಿದ್ದಾಗ, ತ್ರಿವೇಣಿ, ಪೃಥ್ವಿಗೌಡ, ಯಶವಂತ ಮತ್ತು ಎಂ.ಡಿ. ವೀರೇಶ್ ಎಂಬ ನಾಲ್ವರು ಆರೋಪಿಗಳು ಕಾರನ್ನು ಅಡ್ಡಗಟ್ಟಿ ಹಣಕ್ಕಾಗಿ ಪೀಡಿಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಕಾರಿನ ಗ್ಲಾಸ್ಗೆ ಗುದ್ದಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಬೆಂಗಾವಲು ಸಿಬ್ಬಂದಿ ಮಧ್ಯಪ್ರವೇಶಿಸಿ ಶ್ರೀಗಳನ್ನು ರಕ್ಷಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
3 ಕೋಟಿ ರೂಪಾಯಿಗೆ ಬೇಡಿಕೆ:
ಆರೋಪಿಗಳು ಶ್ರೀಗಳ ಶಿಷ್ಯ ರಾಜಕುಮಾರ್ ಸಿ.ಎಂ. ಅವರಿಗೆ ಕರೆ ಮಾಡಿ 3 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವುದಾಗಿ ಹಾಗೂ ಅತ್ಯಾಚಾರದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಗಳು ಆರೋಪಿಸಿದ್ದಾರೆ. ಈಗಾಗಲೇ ಈ ಕುರಿತು ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದ್ದರೂ, ಆರೋಪಿಗಳು ಖಾಸಗಿ ವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಯಗೊಂಡ ಜಾನಾರ್ ಅವರು ಶ್ರೀಗಳ ದೂರು ಸ್ವೀಕರಿಸಿ, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪವಿತ್ರ ಪೀಠದ ಶ್ರೀಗಳ ಮೇಲೆ ಕೇಳಿಬಂದಿರುವ ಈ ಆರೋಪ-ಪ್ರತ್ಯಾರೋಪಗಳು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿವೆ.

