ರಸಗೋಬ್ಬರ ಕೊರತೆ:2.67 ಲಕ್ಷ ಟನ್ ಯೂರಿಯಾ ಗೊಬ್ಬರ ಪೊರೈಸುವಂತೆ‌ ಕೆಂದ್ರಕ್ಕೆ ರಾಜ್ಯ ಕೃಷಿ ಸಚಿವ ಮನವಿ

Spread the love

ರಸಗೊಬ್ಬರ ಕೊರತೆ: 2.67 ಲಕ್ಷ ಟನ್ ಯೂರಿಯಾ ಪೂರೈಸುವಂತೆ ಕೇಂದ್ರಕ್ಕೆ ಕರ್ನಾಟಕ ಮನವಿ

ಬೆಂಗಳೂರು: 2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವಷ್ಟು ರಸಗೊಬ್ಬರ ಪೂರೈಕೆಯಾಗದ ಕಾರಣ, ಕರ್ನಾಟಕದಲ್ಲಿ ಯೂರಿಯಾ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಕೂಡಲೇ 2.67 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲಾ ರಾಜ್ಯಗಳ ಕೃಷಿ ಸಚಿವರೊಂದಿಗೆ ನಡೆಸಿದ ವೀಡಿಯೊ ಸಂವಾದದಲ್ಲಿ ಪಾಲ್ಗೊಂಡ ಚಲುವರಾಯಸ್ವಾಮಿ ಅವರು, ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದರು.

ಸದನದಲ್ಲಿನ ಚರ್ಚೆ, ಕೊರತೆಯ ವಿವರ

ಕರ್ನಾಟಕ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಕಳೆದ ಎರಡು ದಿನಗಳಿಂದ ರಸಗೊಬ್ಬರ ಕೊರತೆ ಬಗ್ಗೆ ನಡೆದ ಗಂಭೀರ ಚರ್ಚೆಗಳ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಜುಲೈ ತಿಂಗಳಿಗೆ 1.27 ಲಕ್ಷ ಟನ್ ಮತ್ತು ಆಗಸ್ಟ್ ತಿಂಗಳಿಗೆ 1.40 ಲಕ್ಷ ಟನ್ ಯೂರಿಯಾ ಕೊರತೆಯಿದೆ. ಒಟ್ಟಾರೆಯಾಗಿ, 2.67 ಲಕ್ಷ ಟನ್ ಯೂರಿಯಾವನ್ನು ಶೀಘ್ರವೇ ಪೂರೈಸುವ ಅಗತ್ಯವಿದೆ ಎಂದು ವಿವರಣೆ ನೀಡಿದರು.

ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಬಿತ್ತನೆ ಕಾರ್ಯ ಹೆಚ್ಚಿರುವುದರಿಂದ ರೈತರಿಗೆ ರಸಗೊಬ್ಬರ ತುರ್ತಾಗಿ ಬೇಕಾಗಿದೆ. ವಿಳಂಬವಾದರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೆಚ್ಚಿನ ಬೆಳೆಗಳಿಗೆ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುವುದರಿಂದ ಇದರ ಪೂರೈಕೆ ಅತ್ಯಂತ ಅಗತ್ಯ ಎಂದು ಸಚಿವರು ಒತ್ತಿ ಹೇಳಿದರು. ಅಲ್ಲದೆ, ಮುಂಬರುವ ರಬಿ ಹಂಗಾಮಿಗೆ ಬೇಕಾದ ರಸಗೊಬ್ಬರಗಳ ವಿವರವನ್ನೂ ಸಲ್ಲಿಸಿ, ಅದರಂತೆ ಹಂಚಿಕೆ ಮಾಡುವಂತೆ ಮನವಿ ಮಾಡಿದರು.

ಕೇಂದ್ರ ಸಚಿವರ ಭರವಸೆ

ಕರ್ನಾಟಕದ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ರಸಗೊಬ್ಬರ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿ ಆದಷ್ಟು ಬೇಗ ಕರ್ನಾಟಕಕ್ಕೆ ಬಾಕಿ ಇರುವ ರಸಗೊಬ್ಬರವನ್ನು ಪೂರೈಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *