

ಗದಗ: ಸ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಮಗ ದವನ್ ರಾಕೇಶ್ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಪರಿಚಯಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ತಮ್ಮ ರಾಜಕೀಯ ಉತ್ತರಾಧಿಕಾರಿಯ ಮುನ್ಸೂಚನೆ ಇದೇನಾ ಎಂಬ ಮಾತುಗಳು ಇದೀಗ ಎಲ್ಲೆಡೆ ಕೇಳಿಬರುತ್ತಿವೆ.
ಗದಗ ತಾಲೂಕು ಕುರುಬರ ಸಂಘದ ವತಿಯಿಂದ ಕನಕ ಭವನದಲ್ಲಿ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಕನಕೋತ್ಸವ’ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮೊಮ್ಮಗ ದವನ್ ಜೊತೆ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದುದ್ದಕ್ಕೂ ಅವರು ದವನ್ ಅವರನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡಿದ್ದರು.
ಡೋಲು ಬಾರಿಸುವ ಮೂಲಕ ರಾಜಕೀಯ ವೇದಿಕೆಗೆ ಮೊದಲ ಅನುಭವ
ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ದವನ್ ಕೈಯಿಂದಲೇ ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ, ಕನಕದಾಸರ ಪ್ರತಿಮೆಗೆ ಹಾರ ಹಾಕುವ ಅವಕಾಶವನ್ನು ಕೂಡ ಮೊಮ್ಮಗನಿಗೆ ನೀಡುವ ಮೂಲಕ, ಸಿದ್ದರಾಮಯ್ಯ ಅವರು ದವನ್‌ಗೆ ಹೆಚ್ಚಿನ ಮನ್ನಣೆ ನೀಡಲು ಪ್ರಯತ್ನಿಸಿದರು. ವೇದಿಕೆಯ ಮೇಲೆ ಸನ್ಮಾನ ಸ್ವೀಕರಿಸಲು ಬಂದ ಗಣ್ಯರು ಹಾಗೂ ಸ್ಥಳೀಯ ಮುಖಂಡರಿಗೆ ತಮ್ಮ ಮೊಮ್ಮಗನನ್ನು ಪ್ರೀತಿಯಿಂದ ಪರಿಚಯ ಮಾಡಿಕೊಡುತ್ತಿದ್ದರು.
ಮೊಮ್ಮಗನ ಹೆಗಲ ಮೇಲೆ ಕೈ ಹಾಕಿ, ಎಲ್ಲರೊಂದಿಗೆ ಬೆರೆಯುವಂತೆ ಪ್ರೋತ್ಸಾಹಿಸುತ್ತಿದ್ದ ದೃಶ್ಯ, ಸಿದ್ದರಾಮಯ್ಯ ಅವರು ದವನ್ ರಾಜಕೀಯ ಪ್ರವೇಶಕ್ಕೆ ತಾಲೀಮು ನಡೆಸುತ್ತಿದ್ದಾರೆಯೇ ಎಂಬ ಚರ್ಚೆಗೆ ಮತ್ತಷ್ಟು ಇಂಬು ನೀಡಿತು.ದವನ್ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಅಜ್ಜನ ಮಾರ್ಗದರ್ಶನದಲ್ಲಿ ಅವರು ಸಾರ್ವಜನಿಕ ಜೀವನಕ್ಕೆ ಮೊದಲ ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ರಾಕೇಶ್ ಉತ್ತರಾಧಿಕಾರಿ ಸ್ಥಾನಕ್ಕೆ ದವನ್ ಪ್ರವೇಶ
ಈ ಹಿಂದೆ, ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಹಾಗೂ ವರುಣಾ ಕ್ಷೇತ್ರದ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದರು. ಆದರೆ, ಅವರ ಅಕಾಲಿಕ ನಿಧನದ ನಂತರ ಆ ಸ್ಥಾನದಲ್ಲಿ ಶೂನ್ಯ ಆವರಿಸಿತ್ತು. ಇದೀಗ, ರಾಕೇಶ್ ಅವರ ಪುತ್ರ ದವನ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಕರೆತರುವ ಮೂಲಕ, ಸಿದ್ದರಾಮಯ್ಯ ತಮ್ಮ ರಾಜಕೀಯ ಪರಂಪರೆಯನ್ನು ಮುಂದುವರೆಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರ ಈ ನಡೆಯು ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ದವನ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಮೊಮ್ಮಗನನ್ನು ರಾಜಕೀಯಕ್ಕೆ ತರುವ ಮೂಲಕ, ಸಿದ್ದರಾಮಯ್ಯ ಅವರು ತಮ್ಮ ಕುಟುಂಬದ ರಾಜಕೀಯ ನೆಲೆಗಟ್ಟನ್ನು ಮತ್ತಷ್ಟು ಭದ್ರಪಡಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

