
ರಾಣೇಬೆನ್ನೂರ: ಎಲ್ಲಿ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಾರೋ, ಅಲ್ಲಿ ಸುಸಂಸ್ಕೃತ ಹಾಗೂ ನೆಮ್ಮದಿಯ ವಾತಾವರಣ ಇರುತ್ತದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಪೂಜಿಸುವ ಮತ್ತು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಆರ್.ಸಿ. ಪಾಟೀಲ್ ಹೇಳಿದರು.
ನಗರದ ಹೊರವಲಯದ ಮಾಗೋಡ ರಸ್ತೆಯಲ್ಲಿರುವ ಸಾರಿಗೆ ಘಟಕದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣನ್ನು ಅಬಲೆಯೆಂದು ಹಿಯಾಳಿಸಬಾರದು. ಜನ್ಮ ನೀಡಿದ ತಾಯಿಯಿಂದ ಹಿಡಿದು ರವಿವಾರದಂದು ಆಟೋ ರಿಕ್ಷಾ ಹಾಗೂ ವಿಮಾನ ಚಾಲನೆಯವರೆಗೆ ಮಹಿಳೆಯರು ಎಲ್ಲ ರಂಗಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ತಾವು ಯಾರಿಗಿಂತಲೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರೇಮಾಗನೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಾ ಆರ್. ಪಾಟೀಲ್ ಮಾತನಾಡಿ, ಮಹಿಳೆಯರು ಇಂದು ಸ್ವಾವಲಂಬಿಗಳಾಗಿ ಸಂಸಾರದ ಜವಾಬ್ದಾರಿಯನ್ನು ಹೊರುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕಿಯರಾಗಿ ಮತ್ತು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಚಾರಿ ನಿರೀಕ್ಷಕರಾದ ನಾಗರಾಜ ಕಳಕ್ಕವರ, ಪುಷ್ಪಾ, ಸಂಚಾರಿ ನಿಯಂತ್ರಕ ರಮೇಶ ತೇಲ್ಕರ, ಆರ್.ಎನ್. ಮಾಳನಾಯಕನಹಳ್ಳಿ ಹಾಗೂ ನಿಟ್ಟೂರ ಶಾಲೆಯ ಶಿಕ್ಷಕಿ ಶೈಲಾಬಾನು ಜಾತಗೇರ ಉಪಸ್ಥಿತರಿದ್ದರು. ಸಾರಿಗೆ ಸಂಸ್ಥೆಯ ಮಹಿಳಾ ನಿರ್ವಾಹಕಿಯರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

