ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ಉಪನ್ಯಾಸ: ನಾಳೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮ

Spread the love

ಧಾರವಾಡ: ಸಾಹಿತ್ಯ, ಸಂಗೀತ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ಪ್ರೊ. ಸದಾನಂದ ಕನವಳ್ಳಿ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದೆ. ಈ ಕಾರ್ಯಕ್ರಮವು ಸೆ:ರಂದು ಸಂಜೆ ೬ ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ‘ಆದರ್ಶಗಳ ಕಣಜವಾಗಿದ್ದ ಸದಾನಂದ ಕನವಳ್ಳಿ’ ವಿಷಯ ಕುರಿತು ಧಾರವಾಡದ ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಅತಿಥಿ ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತ ಪ್ರಿಯರಾಗಿದ್ದ ಕನವಳ್ಳಿಯವರ ಮಗಳು, ರಾಯಚೂರಿನ ಸರಿತಾ ಮಹೇಶ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ಮಹಾ ಸಾಧಕರ ಸ್ಮರಣೆ:
ಪ್ರೊ. ಸದಾನಂದ ಕನವಳ್ಳಿ ಅವರು ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಅವರು, ಕೊಪ್ಪಳ ಹಾಗೂ ಲಕ್ಷ್ಮೇಶ್ವರದ ಕಾಲೇಜುಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಅಲ್ಪಾವಧಿಯಲ್ಲಿ ೧೧೦ ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವು ಅನುವಾದಿತ, ಸಂಪಾದಿತ ಕೃತಿಗಳು, ಜೀವನಚರಿತ್ರೆಗಳು, ಮತ್ತು ಕ್ರೀಡೆ ಹಾಗೂ ಪರಿಸರ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ, ಕನ್ನಡದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರ ಕುರಿತು ಬರೆದ ಕೃತಿಗಳು ಗಮನಾರ್ಹವಾಗಿವೆ.
೨೦೧೫ರ ಏಪ್ರಿಲ್ ೩ರಂದು ನಿಧನರಾದ ಕನವಳ್ಳಿ ಅವರು ತಮ್ಮ ದೇಹವನ್ನು ವೈದ್ಯಕೀಯ ಅಧ್ಯಯನಕ್ಕೆ ದಾನ ಮಾಡುವ ಮೂಲಕ ಆದರ್ಶ ಮೆರೆದಿದ್ದರು. ಅವರ ಗೌರವಾರ್ಥ, ಕಿರಿಯ ಸಹೋದರನ ಪುತ್ರ ವಿರೇಶ ಬಸಪ್ಪ ಕನವಳ್ಳಿ ಅವರು ೨೦೨೩ರಲ್ಲಿ ದತ್ತಿಯನ್ನು ಸ್ಥಾಪಿಸಿದ್ದು, ಈ ಉಪನ್ಯಾಸ ಕಾರ್ಯಕ್ರಮಕ್ಕೆ ಕಾರಣವಾಗಿದೆ.

ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಹಾಗೂ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *