
ಚೈನೈ:ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಡಾ. ಮೌತ್ ಮ್ಯಾಟರ್ಸ್ ಎಂಬುವವರು ಹಂಚಿಕೊಂಡ ಒಂದು ಹೃದಯ ಕರಗಿಸುವ ಕಥೆ, ಓದುಗರ ಕಣ್ಣುಗಳನ್ನು ತೇವಗೊಳಿಸಿದೆ. ಲಂಡನ್ನಲ್ಲಿ ನೆಲೆಸಿರುವ ತಮ್ಮ ಸ್ವಂತ ಮಗಳಿಂದ ಕೈಬಿಡಲ್ಪಟ್ಟ ವೃದ್ಧ ತಂದೆಯೊಬ್ಬರ ಸ್ವಾಭಿಮಾನದ ಬದುಕು ಎಲ್ಲರ ಗಮನ ಸೆಳೆದಿದೆ.
ಅವರ ವರದಿಯ ಪ್ರಕಾರ, ಚೆನ್ನೈನ ಜನನಿಬಿಡ ರೈಲು ನಿಲ್ದಾಣಗಳಲ್ಲಿ 80 ವರ್ಷದ ವೃದ್ಧರೊಬ್ಬರು ಪುಟ್ಟ ಬುಟ್ಟಿಯೊಂದನ್ನು ಹಿಡಿದು ಸಿಹಿ ತಿಂಡಿಗಳು ಮತ್ತು ಪೋಲಿಗಳನ್ನು ಮಾರುತ್ತಿದ್ದಾರೆ. ತಮ್ಮ 70 ರ ದಶಕದಲ್ಲಿರುವ ಅವರ ಪತ್ನಿ ಪ್ರೀತಿಯಿಂದ ಮನೆಯಲ್ಲಿಯೇ ಈ ತಿನಿಸುಗಳನ್ನು ತಯಾರಿಸುತ್ತಾರೆ. ಆ ವೃದ್ಧರು ಘನತೆಯಿಂದ ಅವುಗಳನ್ನು ರೈಲುಗಳಲ್ಲಿ ಮಾರಾಟ ಮಾಡಿ ತಮ್ಮ ಮತ್ತು ಪತ್ನಿಯ ಹೊಟ್ಟೆ ಹೊರೆಯುತ್ತಿದ್ದಾರೆ.
ಅವರ ಮಗಳು ವಿದೇಶದಲ್ಲಿ, ಅದರಲ್ಲೂ ಲಂಡನ್ನಂತಹ ಮಹಾನಗರದಲ್ಲಿ ಸಂಪತ್ತಿನ ನಡುವೆ ಬದುಕುತ್ತಿದ್ದಾಳೆ. ಆದರೆ, ಅದೇ ಸಂಪತ್ತು ತನ್ನ ತಂದೆ-ತಾಯಿಯ ಕಣ್ಣೀರು ಒರೆಸಲು ಬರುವುದಿಲ್ಲ. ಈ ವಯಸ್ಸಾದ ಜೀವಗಳು ಬೇರೆಯವರ ಮೇಲೆ ಅವಲಂಬಿತರಾಗದೆ, ತಮ್ಮ ಸ್ವಂತ ಶ್ರಮದಿಂದ ಜೀವಿಸುತ್ತಿದ್ದಾರೆ. ಈ ಕಥೆಯು ಹೊರದೇಶದಲ್ಲಿನ ಸಂಪತ್ತು ಎಷ್ಟಿದ್ದರೂ, ತಂದೆ-ತಾಯಿಯ ಪ್ರೀತಿಗೆ ಪರ್ಯಾಯವಾಗಲಾರದು ಎಂಬುದಕ್ಕೆ ಕನ್ನಡಿ ಹಿಡಿದಿದೆ.
ವರದಿಯ ಕೊನೆಯಲ್ಲಿ, ಲೇಖಕರು ನೀಡಿದ ಸಂದೇಶವೂ ಮನ ಕಲಕುತ್ತದೆ. “ಒಂದು ವೇಳೆ ನೀವು ಚೆನ್ನೈಗೆ ಭೇಟಿ ನೀಡಿದರೆ, ರೈಲು ನಿಲ್ದಾಣಗಳಲ್ಲಿ ಇಂತಹ ವೃದ್ಧರನ್ನು ಭೇಟಿ ಮಾಡಿ. ಕೇವಲ ಸಿಹಿ ತಿನಿಸುಗಳನ್ನು ಖರೀದಿಸಬೇಡಿ, ಅವರ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾಭಿಮಾನವನ್ನು ಬೆಂಬಲಿಸಿ. ಆ ಆಹಾರದಲ್ಲಿ ಕೇವಲ ಸವಿ ಮಾತ್ರ ಇರುವುದಿಲ್ಲ, ಅವರ ಬದುಕು ಹೋರಾಟದ ಕಥೆಯೂ ಇರುತ್ತದೆ.”
ಈ ವರದಿ ಇಂದಿನ ಯುವ ಪೀಳಿಗೆಗೆ ಒಂದು ಪಾಠವಾಗಿದೆ.
ಹಣ ಮತ್ತು ಭೌತಿಕ ಸುಖಗಳು ಮುಖ್ಯವಾಗಿದ್ದರೂ, ವೃದ್ಧಾಪ್ಯದಲ್ಲಿರುವ ಹೆತ್ತವರನ್ನು ನೋಡಿಕೊಳ್ಳುವುದು ಅದಕ್ಕಿಂತ ಹೆಚ್ಚು ಮುಖ್ಯ. ಅವರ ಪ್ರೀತಿ ಮತ್ತು ತ್ಯಾಗಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ. ಈ ಕಥೆ, ಎಷ್ಟೇ ಶ್ರೀಮಂತರಾಗಿದ್ದರೂ ಹೃದಯವಂತಿಕೆ ಇಲ್ಲದಿದ್ದರೆ ಆ ಸಂಪತ್ತು ವ್ಯರ್ಥ ಎಂಬುದನ್ನು ಮನಮುಟ್ಟುವಂತೆ ತಿಳಿಸುತ್ತದೆ.


