ಗುಡಿಸಾಗರ ಜನರ ಜೀವದ ಜೊತೆ ಚೆಲ್ಲಾಟಕ್ಕೆ ಬ್ರೇಕ್! ಕಲುಷಿತ ನೀರು ಪ್ರಕರಣ:ಎಚ್ಚತ್ತು ದೌಡಾಯಿಸಿದ ಜಿಲ್ಲಾಡಳಿತ?

Spread the love

ನವಲಗುಂದ: ನಿನ್ನೆ ರಾತ್ರಿ, ‘ಪಬ್ಲಿಕ್ ಸಮಾಚಾರ’ ವರದಿ ಪ್ರಕಟಿಸಿದ್ದ ಗುಡಿಸಾಗರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಮುಂಜಾನೆ ಗ್ರಾಮಕ್ಕೆ ಭೇಟಿ ನೀಡಿ, ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿದರು.

ಪಬ್ಲಿಕ್ ಸಮಾಚಾರ’ ವರದಿಗೆ ಎಚ್ಚೆತ್ತ ಆಡಳಿತ
ನಿನ್ನೆ ರಾತ್ರಿ “ಗುಡಿಸಾಗರ ಜನರ ಜೀವದ ಜೊತೆ ಚೆಲ್ಲಾಟ” ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾದ ಬೆನ್ನಲ್ಲೇ, ಜಿಲ್ಲಾಡಳಿತ ಕೂಡಲೇ ಕಾರ್ಯಪ್ರವೃತ್ತವಾಯಿತು.

ಮಂಗಳವಾರ ಸಂಜೆ ಗ್ರಾಮದಲ್ಲಿ 16ಕ್ಕೂ ಹೆಚ್ಚು ಜನ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆಗೆ ಗ್ರಾಮದ ಕೆರೆಯಿಂದ ಪೂರೈಕೆಯಾದ ಕುಡಿಯುವ ನೀರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು.

‘ಬುಧವಾರ ಶಾಸಕ ಎನ್.ಹೆಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ ಹಾಗೂ ಎಸ್.ಪಿ ಗುಂಜನ್ ಆರ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೋನರಡ್ಡಿ, “ಗ್ರಾಮಕ್ಕೆ ಶುದ್ಧೀಕರಿಸಿದ ನೀರನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡಿ. ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಆಸ್ಪತ್ರೆಗೆ ದಾಖಲಾದವರಿಗೆ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಿ” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನೀರು ಪರೀಕ್ಷೆಗೆ ಮಾದರಿ ಕಳುಹಿಸಿದ ಡಿಸಿ
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, “ಸುಮಾರು 19 ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ, ಗ್ರಾಮದ ಕುಡಿಯುವ ನೀರಿನ ಕೆರೆ, ಟ್ಯಾಂಕ್ ಹಾಗೂ ಮನೆಗಳ ನಳಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ತಿಳಿಸಿದರು.

ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ನಡೆಸಲು 30 ಆಶಾ ಕಾರ್ಯಕರ್ತರ ತಂಡವನ್ನು ರಚಿಸಲಾಗಿದ್ದು, ಈಗಾಗಲೇ 600ಕ್ಕೂ ಹೆಚ್ಚು ಮನೆಗಳ ಪರಿಶೀಲನೆ ಪೂರ್ಣಗೊಂಡಿದೆ. ನೀರಿನ ವರದಿ ಬಂದ ಬಳಿಕ, ಅಧಿಕಾರಿಗಳ ನಿರ್ಲಕ್ಷ್ಯ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು.

ಆರ್.ಓ. ಪ್ಲಾಂಟ್ ದುರಸ್ತಿಗೆ ಸೂಚನೆ
ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ ಅವರು, “ಗ್ರಾಮದಲ್ಲಿನ ಮೂರು ಆರ್.ಓ. ಪ್ಲಾಂಟ್‌ಗಳಲ್ಲಿ ಒಂದನ್ನು ಈಗಾಗಲೇ ದುರಸ್ತಿಗೊಳಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದವುಗಳನ್ನು ತಕ್ಷಣ ಸರಿಪಡಿಸಲು ಸೂಚನೆ ನೀಡಲಾಗಿದೆ. ಮಧ್ಯಂತರದಲ್ಲಿ ಶುದ್ಧೀಕರಿಸಿದ ನೀರನ್ನು ಟ್ಯಾಂಕರ್‌ಗಳ ಮೂಲಕ ಗ್ರಾಮಕ್ಕೆ ಪೂರೈಸಲಾಗುವುದು” ಎಂದು ಭರವಸೆ ನೀಡಿದರು.

ನಂತರ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರಿನ ಕೆರೆ ಮತ್ತು ಆರೋಗ್ಯ ಕೇಂದ್ರವನ್ನು ಪರಿಶೀಲಿಸಿದರು. ಗ್ರಾಮಸ್ಥರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿ ನೀಡುವಂತೆ ಅವರು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ನವಲಗುಂದ ತಹಶೀಲ್ದಾರ ಸುಧೀರ ಸಾಹುಕಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ತಾಲೂಕು ವೈದ್ಯಾಧಿಕಾರಿ ಡಾ. ಕರ್ಲವಾಡ, ಗುಡಿಸಾಗರ ಗ್ರಾಮಪಂಚಾಯತ್ ಅಧ್ಯಕ್ಷೆ ರತ್ನಮ್ಮ ಗುಡಿಸಲಮನಿ, ಪಿಡಿಓ ಎಸ್.ಎಂ. ಹೂಗಾರ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *