
ಧಾರವಾಡ: “ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಜಿಲ್ಲೆಯ ಕೀರ್ತಿಯನ್ನು ಬೆಳಗುತ್ತಿರುವ ಕ್ರೀಡಾಪಟುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯು ತಕ್ಷಣವೇ ಸೂಕ್ತ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು” ಎಂದು ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು 2026-27ನೇ ಸಾಲಿನ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ ತಾಲೂಕು ಮಟ್ಟದ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯ ಸಭೆ ಜರುಗಿಸಿ, ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯ ಕುಸ್ತಿ, ಜಿಮ್ನಾಸ್ಟಿಕ್ ಮತ್ತು ಅಥ್ಲೆಟಿಕ್ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ಪೂರಕವಾಗಿ ಜಿಮ್, ಸುಸಜ್ಜಿತ ಮೈದಾನ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಇಲಾಖೆಯು ಕ್ರಮವಹಿಸಬೇಕು. ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗಾಗಿ ಪ್ರತ್ಯೇಕ ವೈದ್ಯರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಅವರು ಸೂಚಿಸಿದರು. ಕ್ರೀಡಾ ವಸತಿನಿಲಯಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ, ಅವರ ದೈಹಿಕ ಮತ್ತು ಮಾನಸಿಕ ಸದೃಢತೆಗೆ ತರಬೇತುದಾರರು ಹೆಚ್ಚಿನ ಗಮನ ನೀಡಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕ್ರೀಡಾಪಟುಗಳ ಆಯ್ಕೆ ಶಿಬಿರದ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಅಣ್ಣಿಗೇರಿಯಲ್ಲಿ ಫೆ. 17, ಹುಬ್ಬಳ್ಳಿ ಮತ್ತು ಅಳ್ನಾವರದಲ್ಲಿ ಫೆ. 19, ಕುಂದಗೋಳದಲ್ಲಿ ಫೆ. 20, ಕಲಘಟಗಿಯಲ್ಲಿ ಫೆ. 23, ನವಲಗುಂದದಲ್ಲಿ ಫೆ. 26 ಹಾಗೂ ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447424 ಅನ್ನು ಸಂಪರ್ಕಿಸಬಹುದು. ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸೇರಿದಂತೆ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತರಬೇತುದಾರರು ಉಪಸ್ಥಿತರಿದ್ದರು.

