
ಧಾರವಾಡ: ಪರಿಶಿಷ್ಟ ಜಾತಿ ಉಪಯೋಜನೆ (SCSP) ಮತ್ತು ಬುಡಕಟ್ಟು ಉಪಯೋಜನೆ (TSP) ಅಡಿಯಲ್ಲಿ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಶೇ. 100ರಷ್ಟು ಗುರಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾಗಿರುವ ಅನುದಾನ ಲ್ಯಾಪ್ಸ್ ಆಗದಂತೆ ಎಲ್ಲ ಇಲಾಖಾ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ನಿನ್ನೆ (ಸೆ. 25) ಸಂಜೆ 2025-26ನೇ ಸಾಲಿನ ಆಗಸ್ಟ್ ಮಾಹೆಯ ಅಂತ್ಯದವರೆಗಿನ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಜನೆಗಳ ಪುನರಾವರ್ತನೆಗೆ ಬ್ರೇಕ್ ಹಾಕಿ
ಸರ್ಕಾರದ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಕೃಷಿ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಒಮ್ಮೆ ಸದುಪಯೋಗಪಡಿಸಿಕೊಂಡ ಫಲಾನುಭವಿಗಳು ಪುನಃ ಅದೇ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ರೈತರನ್ನು ಗುರುತಿಸಿ, ತೋಟಗಾರಿಕೆ ಉತ್ತೇಜನಕ್ಕಾಗಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದರು. ರಸ್ತೆ ಮತ್ತು ಇತರೆ ಕಾಮಗಾರಿಗಳ ಅನುದಾನ ವ್ಯಯ ಮಾಡುವಾಗ ಸರಿಯಾದ ಯೋಜನೆ ಮತ್ತು ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು
ಕಡ್ಡಾಯ ಶಿಕ್ಷಣದ ಅಡಿಯಲ್ಲಿ, 14 ವರ್ಷದೊಳಗಿನ ಎಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ (ಡ್ರಾಪ್ಔಟ್) ಎಂಬುದನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸುವಂತೆ ಡಿಸಿ ಶಿಕ್ಷಣ ಇಲಾಖೆಗೆ ಸೂಚಿಸಿದರು. ಅಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಾವ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು.
ಇದಕ್ಕಾಗಿ ಮದರಸಗಳು ಮತ್ತು ಕ್ರಿಶ್ಚಿಯನ್ ಶಾಲೆಗಳನ್ನು ಭೇಟಿ ಮಾಡಿ ಅವರ ಸಹಾಯವನ್ನು ಪಡೆಯಬೇಕು ಎಂದರು. ಹೆಸ್ಕಾಂ ಇಲಾಖೆಯವರು ಮಳೆಗಾಲದಲ್ಲಿ ಬಿದ್ದಿರುವ ಮತ್ತು ಬಾಗಿರುವ ಕಂಬಗಳನ್ನು ಸರಿಪಡಿಸಿ, ಬಂದಿರುವ ಅರ್ಜಿಗಳನ್ನು ಸರಿಯಾದ ಸಮಯದಲ್ಲಿ ವಿಲೇವಾರಿ ಮಾಡಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸಭೆ ಸಹ ಜರುಗಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

