
ಬೆಂಗಳೂರು: ವೈದ್ಯಕೀಯ ಕೋರ್ಸ್ ಸೀಟು ಪಡೆಯಲು ವಿಕಲಚೇತನ ಕೋಟಾದಡಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ 26 ವಿದ್ಯಾರ್ಥಿಗಳ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದೂರು ನೀಡಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೇಗಾಯಿತು ಅಕ್ರಮ ಪತ್ತೆ ?
2025ನೇ ಸಾಲಿನ ಯುಜಿಸಿಇಟಿ ಮತ್ತು ಯುಜಿ ನೀಟ್ ಸೀಟುಗಳಿಗಾಗಿ ಅರ್ಜಿ ಸಲ್ಲಿಸಿದ್ದ 21 ಅಭ್ಯರ್ಥಿಗಳು ಆರಂಭದಲ್ಲಿ ಅರ್ಜಿ ಸಲ್ಲಿಸದೆ, ಅರ್ಜಿ ತಿದ್ದುಪಡಿಯ ವೇಳೆ ವಿಕಲಚೇತನ ಮೀಸಲಾತಿ ಕೋರಿದ್ದರು. ಇದರಿಂದ ಅನುಮಾನಗೊಂಡ ಕೆಇಎ, ನಿಯಮಾನುಸಾರ ಈ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿತ್ತು. ಅಲ್ಲಿಂದ ಮತ್ತಷ್ಟು ಪರೀಕ್ಷೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯ ವೇಳೆ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಗವಿಕಲ ಪ್ರಮಾಣ ಪತ್ರಗಳು ನಕಲಿ ಎಂದು ಸಾಬೀತಾಗಿದೆ. ಮೆಡಿಕಲ್ ಬೋರ್ಡ್ ಚೇರ್ಮನ್ ನಕಲಿ ಸಹಿ ಮತ್ತು ಸೀಲ್ಗಳನ್ನು ಬಳಸಿ ಈ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಯುಡಿಐಡಿ ಕಾರ್ಡ್ಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಪಡೆದಿರುವುದು ಕೂಡ ತನಿಖೆಯಿಂದ ಬಯಲಾಗಿದೆ.
ನಿಮ್ಹಾನ್ಸ್ ಸರ್ಟಿಫಿಕೇಟ್ ಕೂಡ ನಕಲಿ
ಅಭ್ಯರ್ಥಿಗಳು ನಿಮ್ಹಾನ್ಸ್ ಆಸ್ಪತ್ರೆಯಿಂದ ನೀಡಿದ ವೈದ್ಯಕೀಯ ಪ್ರಮಾಣ ಪತ್ರಗಳು ಕೂಡ ನಕಲಿ ಎಂದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆಇಎ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರಂಭದಲ್ಲಿ ಪತ್ತೆಯಾದ 21 ಅಭ್ಯರ್ಥಿಗಳ ಜೊತೆಗೆ ಇನ್ನೂ ಐವರನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

