ದಸರಾ ಉದ್ಘಾಟನೆ ವಿವಾದ: ಹೈಕೋರ್ಟ್‌ಗೆ ಮತ್ತೆರಡು ಅರ್ಜಿಗಳು

Spread the love

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಬೆಂಗಳೂರು ನಿವಾಸಿ ಎಚ್.ಎಸ್. ಗೌರವ್ ಸಲ್ಲಿಸಿರುವ ಅರ್ಜಿಯಲ್ಲಿ, ಸರ್ಕಾರವು ಹಿಂದೂಯೇತರ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವಾಗಿದ್ದು, ಅದನ್ನು ಹಿಂದೂ ಗಣ್ಯರಿಂದಲೇ ಉದ್ಘಾಟಿಸಬೇಕು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ, ಹಿಂದೂ ಆಗಮಿಕ ಪದ್ಧತಿಗಳ ಪ್ರಕಾರವೇ ದಸರಾ ಉದ್ಘಾಟನೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಇದೇ ವಿಚಾರವಾಗಿ ಬೆಂಗಳೂರಿನ ಉದ್ಯಮಿ ಟಿ. ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್. ಸೌಮ್ಯ ಸಹ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದಾರೆ.

ಈ ಹಿಂದೆ ಇದೇ ವಿಷಯವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಸಲ್ಲಿಸಲಾಗಿರುವ ಈ ಮೂರು ಅರ್ಜಿಗಳು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ದಸರಾ ಉದ್ಘಾಟನೆಗೆ ಸಂಬಂಧಿಸಿದ ವಿವಾದ ಇದೀಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದ್ದು, ಇದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧದ ವಿರೋಧವನ್ನು ಇನ್ನಷ್ಟು ಹೆಚ್ಚಿಸಿದೆ.

Leave a Reply

Your email address will not be published. Required fields are marked *