ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯನವರಿಂದ ಅಧಿಕಾರಿಗಳಿಗೆ ಖಡಕ್ ಆದೇಶ – ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಮಾಡುವಂತೆ ಆದೇಶ

Spread the love

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ನೆರೆ ಹಾನಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ, ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಖಡಕ್ ಆದೇಶ ಹೊರಡಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಿಂದ ನಡೆದ ಸಭೆಯಲ್ಲಿ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳಿಂದ ಮಳೆ ಹಾನಿ, ಪರಿಹಾರ ವಿತರಣೆ ಹಾಗೂ ಬಾಕಿ ಉಳಿದ ಪ್ರಕರಣಗಳ ಕುರಿತು ಮಾಹಿತಿ ಪಡೆದರು.

ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇಕಡಾ 4ರಷ್ಟು ಹೆಚ್ಚು ಮಳೆ ದಾಖಲೆಯಾಗಿದೆ. ವಾಡಿಕೆ ಮಳೆ 721 ಮಿ.ಮೀ ಇದ್ದರೆ, ಈ ಅವಧಿಯಲ್ಲಿ 753 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆಯಾಗಿದ್ದರೆ, ಈ ಬಾರಿ ಚಾಮರಾಜನಗರ ಜಿಲ್ಲೆಯಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಶೇ.20 ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷದ ಹೋಲಿಕೆಗೆ ಕಡಿಮೆಯಾಗಿದೆ. ಗರಿಷ್ಠ ಸಾಮರ್ಥ್ಯ 895.62 ಟಿಎಂಸಿ ಇದ್ದರೆ, ಪ್ರಸ್ತುತ 840.52 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹವಿತ್ತು. ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8 ಗೇಟ್‌ಗಳು ಅಳವಡಿಕೆಗೆ ಸಿದ್ಧವಾಗಿದೆ. ಎರಡನೇ ಬೆಳೆಗೆ ನೀರು ಹರಿಸುವುದು ಈ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿರುವುದರಿಂದ, ಮೊದಲ ಬೆಳೆಗೆ ಮಾತ್ರ ನೀರು ಬಿಡಲು ನಿರ್ಧರಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಶೇ.98 ಬಿತ್ತನೆ ಪೂರ್ಣಗೊಂಡಿದ್ದು, 82.50 ಲಕ್ಷ ಹೆಕ್ಟೇರ್ ಗುರಿಗೆ ಎದುರು 80.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಇದುವರೆಗೂ 5,20,663 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿ ದೃಢಪಟ್ಟಿದೆ.

ಮಳೆಯಿಂದಾಗಿ ಎಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 111 ಮಂದಿ ಮೃತಪಟ್ಟಿದ್ದು, ಎಲ್ಲಾ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಒಟ್ಟು 5.55 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದೇ ಅವಧಿಯಲ್ಲಿ 651 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 9,087 ಮನೆಗಳು ಭಾಗಶಃ ಹಾನಿಯಾಗಿವೆ. ಇದರಲ್ಲಿ 649 ಸಂಪೂರ್ಣ ಹಾನಿಗೀಡಾದ ಮನೆಗಳಿಗೆ ಹಾಗೂ 8,608 ಭಾಗಶಃ ಹಾನಿಗೀಡಾದ ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ.

ಇದಲ್ಲದೆ, 766 ಜಾನುವಾರುಗಳು ಸಾವಿಗೀಡಾಗಿದ್ದು, 1.52 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡುವುದರ ಜೊತೆಗೆ ವಸತಿ ಯೋಜನೆಗಳಡಿ ಮನೆ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *