
ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಯು ಒಂದೇ ಕುಟುಂಬದ ಸದಸ್ಯರು ಠೇವಣಿ ಇಟ್ಟಿದ್ದ ಹಣವನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ, ಜಿಲ್ಲಾ ಗ್ರಾಹಕರ ಆಯೋಗವು ಸೊಸೈಟಿಗೆ ದಂಡ ವಿಧಿಸಿ, ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಹುಬ್ಬಳ್ಳಿಯ ಸೆಂಟ್ರಲ್ ಎಕ್ಸೈಸ್ ಕಾಲೋನಿಯ ನಿವಾಸಿಗಳಾದ ಅಶೋಕ ಅನ್ವೇಕರ್, ರೇಖಾ ಅನ್ವೇಕರ್, ಸುಮಾ ವಿಠ್ಠಲಕರ್ ಮತ್ತು ಅವರ ಮಗಳು ನಿಸ್ಮಿತಾ ವಿಠ್ಠಲಕರ್, ಈ ಸೊಸೈಟಿಯಲ್ಲಿ ಒಟ್ಟು ₹36.50 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದರು. ಕೆಲವು ಠೇವಣಿಗಳ ಅವಧಿ ಮುಕ್ತಾಯವಾಗಿದ್ದರೂ ಮತ್ತು ಕೆಲವು ಮುಕ್ತಾಯವಾಗುವ ಹಂತದಲ್ಲಿದ್ದಾಗಲೂ, ಸೊಸೈಟಿಯ ಆರ್ಥಿಕ ತೊಂದರೆಗಳನ್ನು ಅರಿತು ಇವರು ತಮ್ಮ ಹಣವನ್ನು ಮರಳಿ ನೀಡುವಂತೆ ಮನವಿ ಮಾಡಿದ್ದರು. ಆದರೆ ಸೊಸೈಟಿಯು ಹಣ ಹಿಂದಿರುಗಿಸಲು ವಿಳಂಬ ಮಾಡಿತ್ತು.
ಇದರಿಂದ ಬೇಸತ್ತ ಕುಟುಂಬದ ಸದಸ್ಯರು, ಸೊಸೈಟಿಯ ಸೇವಾ ನ್ಯೂನ್ಯತೆ ಮತ್ತು ವಂಚನೆಯ ಕುರಿತು ದಿನಾಂಕ 09.07.2025 ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ತೀರ್ಪು
ದೂರುಗಳ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿ.ಎ. ಬೋಳಶೆಟ್ಟಿ ಅವರು, ದೂರುದಾರರು ಸೊಸೈಟಿಯ ಸದಸ್ಯರಾಗಿದ್ದು, ಠೇವಣಿ ಹಣವನ್ನು ಸೊಸೈಟಿಯು ತನ್ನ ಅಭಿವೃದ್ಧಿಗೆ ಬಳಸಿಕೊಂಡಿರುವುದು ಕಂಡುಬಂದಿದೆ. ಹಾಗಿದ್ದರೂ, ಹಣದ ಅವಶ್ಯಕತೆ ಇದ್ದಾಗ ಅದನ್ನು ಹಿಂದಿರುಗಿಸದೆ ಇರುವುದು ಗ್ರಾಹಕ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಎಂದು ತೀರ್ಪು ನೀಡಿದ್ದಾರೆ.
ಆಯೋಗದ ಆದೇಶದ ಪ್ರಕಾರ, ಸೊಸೈಟಿಯು ಠೇವಣಿ ಇಟ್ಟ ದಿನಾಂಕದಿಂದ ಬಡ್ಡಿಯೊಂದಿಗೆ ಒಂದು ತಿಂಗಳ ಒಳಗಾಗಿ ಸಂಪೂರ್ಣ ಹಣವನ್ನು ಹಿಂದಿರುಗಿಸಬೇಕು. ಜೊತೆಗೆ, ದೂರುದಾರರಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ ತಲಾ ₹50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚಕ್ಕಾಗಿ ತಲಾ ₹10,000 ನೀಡಬೇಕು ಎಂದು ಆಯೋಗ ಆದೇಶಿಸಿದೆ.

