ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಅಧ್ಯಕ್ಷ ಶಿವಾನಂದ ಬೆಂತೂರ ಸೂಚನೆ; ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟದ ಬಗ್ಗೆ ಸದಸ್ಯರಿಂದ ಆರೋಪ

Spread the love

ಕುಂದಗೋಳ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಅವರು ನಿರ್ದೇಶನ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ತಮ್ಮ ವರದಿಗಳನ್ನು ಮಂಡಿಸಿದರು.

 ನಂತರ ಸಭೆಯ ಅಧ್ಯಕ್ಷತೆ ವಹಿಸಿ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ದರ ಫಲಕ, ಸ್ವಚ್ಛತೆ ಮತ್ತು ನಿಗದಿತ ಸಮಯಕ್ಕೆ ಪಡಿತರ ವಿತರಣೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ, ಅರ್ಹ ಫಲಾನುಭವಿಗಳ ಖಾತೆಗೆ ಹಣ ಸರಿಯಾಗಿ ಜಮಾ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ತೊಂದರೆ ಇರುವ ಪ್ರಕರಣಗಳನ್ನು ಶೀಘ್ರವಾಗಿ ಸರಿಪಡಿಸುವಂತೆ ತಿಳಿಸಿದರು.

ಸಭೆಗೆ ಗೈರಾದ ಸಿಡಿಪಿಒ ಅಧಿಕಾರಿಯ ಹಾಗೂ ಹೆಸಾಂ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಮುಂದಿನ ಸಭೆಗಳಿಗೆ ಸರಿಯಾಗಿ ಹಾಜರಾಗುವಂತೆ ತಾಕೀತು ಮಾಡಿದರು. ಮಳೆಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ಮತ್ತು ಟಿಸಿ ಸಮಸ್ಯೆ ಇರುವ ಕಡೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆಯೂ ಸೂಚಿಸಲಾಯಿತು. ಯುವ ನಿಧಿ ಯೋಜನೆ ಕುರಿತು ಮಾಹಿತಿ ನೀಡಲು ಯೋಜನಾ ಅಧಿಕಾರಿಗಳು ಕಾಲೇಜುಗಳಲ್ಲಿ ಸಭೆಗಳನ್ನು ನಡೆಸಬೇಕು ಎಂದರು. ಬಸ್ ಸಂಚಾರ ಹೆಚ್ಚಿಸುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ, ಕೆಲವೇ ಬಸ್‌ಗಳು ಸರಿಯಾಗಿ ಸಂಚರಿಸುತ್ತಿವೆ ಎಂದು ಗಮನಕ್ಕೆ ಬಂದಿತು. ಈ ಸಮಸ್ಯೆಯನ್ನು ಸರಿಪಡಿಸಲು ಸಂಬಂಧಿಸಿದ ಡಿಪೋಗೆ ಖುದ್ದು ಭೇಟಿ ನೀಡುವುದಾಗಿ ಅವರು ತಿಳಿಸಿದರು.

ಸದಸ್ಯ ಅಡಿವೇಪ್ಪ ಹೆಬಸೂರ ಮಾತನಾಡಿ:

ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂದು ಸಮಿತಿ ಸದಸ್ಯ ಅಡಿವೇಪ್ಪ ಹೆಬಸೂರ ಅವರು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. “ಅಕ್ಕಿ ಅಕ್ರಮ ಮಾರಾಟದ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಲಕ್ಷ್ಮೇಶ್ವರದ ಜನರು ಕುಂದಗೋಳ ತಾಲ್ಲೂಕಿಗೆ ಬಂದು ಅಕ್ಕಿಯನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕೂಡಲೇ ಅವರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಹಾರ ಇಲಾಖಾ ಅಧಿಕಾರಿಗೆ ಆಗ್ರಹಿಸಿದರು.

   ನಂತರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ತಾ ಪಂ ಇಒ ಹಾಗೂ ಸರ್ವ ಸದಸ್ಯರು ರಾಜ್ಯದ ‌ಪಂಚ ಗ್ಯಾರಂಟಿ ಯೋಜನೆಯ  ಕೈಪಿಡಿ ಪುಸ್ತಕ ನೀಡುಗಡೆ ಮಾಡಿದರು.

ಈ ಸಭೆಯಲ್ಲಿ ತಾ ಪಂ ಇಒ ಜಗದೀಶ್ ಕಮ್ಮಾರ, ಸದಸ್ಯರಾದ ಯಲ್ಲಪ್ಪಗೌಡ ಪಾಟೀಲ, ಶಶೀಧರ ಸೋಮರಡ್ಡಿ, ಗೀರಿಶ ಮುದಿಗೌಡ್ರ, ಯಲ್ಲಪ್ಪ ಸಿಂಗಣ್ಣವರ, ಶಂಕ್ರಪ್ಪ ಹಡಪಡ, ಇಷ್ರಾದ ಮುಲ್ಲಾ, ವೇಕನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪೋಟೋ:
ಪಟ್ಟಣದ ತಾಲ್ಲೂಕು ‌ಪಂಚಾಯತ ಸಭಾ ಭವನದಲ್ಲಿ ನಡೆದ ಗ್ಯಾರಂಟಿ ‌ಸಮಿತಿ ಅಧ್ಯಕ್ಷತೆ ವಹಿಸಿ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಶಿವಾನಂದ ಬೆಂತೂರ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಯ ಕೈಪಿಡಿ ಪುಸ್ತಕ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *