
ಕರ್ನಾಟಕದಲ್ಲಿ 40 ಸಾವಿರ, ಧಾರವಾಡದಲ್ಲಿ 1,623 ಆರ್ಟಿಐ ಅರ್ಜಿ ಬಾಕಿ
ನಿಯಮಾನುಸಾರ ಶೀಘ್ರ ವಿಲೇವಾರಿಗೆ ಕ್ರಮ ವಹಿಸಿ: ಮುಖ್ಯ ಮಾಹಿತಿ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಸೂಚನೆ
ಧಾರವಾಡ: ಕರ್ನಾಟಕ ರಾಜ್ಯದಲ್ಲಿ ಬಾಕಿ ಇರುವ ಸುಮಾರು 40 ಸಾವಿರ ಮಾಹಿತಿ ಹಕ್ಕು ಕಾಯ್ದೆಯ (RTI) ಅರ್ಜಿಗಳನ್ನು, ಅದರಲ್ಲೂ ಧಾರವಾಡ ಜಿಲ್ಲೆಯೊಂದರಲ್ಲೇ ವಿಲೇವಾರಿಗೆ ಬಾಕಿ ಇರುವ 1,623 ಅರ್ಜಿಗಳನ್ನು, ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (PIO) ಶೀಘ್ರವಾಗಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲಮಿತಿ ಮೀರಿದರೆ ದಂಡ ಅನಿವಾರ್ಯ:
“ಅಕ್ಟೋಬರ್ 12, 2005 ರಲ್ಲಿ ಅಸ್ತಿತ್ವಕ್ಕೆ ಬಂದ ಮಾಹಿತಿ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಮುಖ ಪಾತ್ರ ವಹಿಸಿದೆ. ಪಿಐಒಗಳು ಅರ್ಜಿಗಳನ್ನು ನಿಯಮಾನುಸಾರ, 30 ದಿನಗಳ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಕಳೆದ 10 ವರ್ಷಗಳಲ್ಲಿ ಮಾಹಿತಿ ನೀಡುವಲ್ಲಿನ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುಮಾರು ₹10 ಕೋಟಿ ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆಯಾಗಿದೆ. ಆದ್ದರಿಂದ ಅರ್ಜಿಗಳಿಗೆ ಕಾಯ್ದೆಯನ್ವಯ ಕಾಲಮಿತಿಯಲ್ಲಿ ಉತ್ತರ ಒದಗಿಸುವುದು ಕಡ್ಡಾಯ,” ಎಂದು ಅಶಿತ್ ಮೋಹನ್ ಪ್ರಸಾದ್ ತಿಳಿಸಿದರು.
ಫೈಲ್ ನೋಟ್ಗಳು, ದಾಖಲೆಗಳ ಬಗ್ಗೆ ಮಾಹಿತಿ:
ಸಾರ್ವಜನಿಕರು ಕೇಳುವ ಕಡತಗಳಲ್ಲಿನ ಫೈಲ್ ನೋಟ್ಗಳನ್ನು ನೀಡಬಹುದು. ಆದರೆ, ನೋಟ್ ಮಾಡಿದ ಅಧಿಕಾರಿಯ ಹೆಸರು ಮತ್ತು ಗುರುತು ಗೌಪ್ಯವಾಗಿರಬೇಕು. ಸರ್ಕಾರಿ ಇಲಾಖೆಗಳ ವೆಬ್ಸೈಟ್ಗಳಿಂದ ಪಡೆಯುವ ಮಾಹಿತಿಗೆ ಪ್ರತ್ಯೇಕ ದೃಢೀಕರಣದ ಅಗತ್ಯವಿಲ್ಲ. ಸರ್ಕಾರಿ ಉದ್ಯೋಗ, ಸೌಲಭ್ಯಗಳು ಮತ್ತು ಅಧಿಕಾರಿಯ ಹೆಸರು/ಹುದ್ದೆ ಸಾರ್ವಜನಿಕ ದಾಖಲೆಗಳಾಗಿರುವುದರಿಂದ ಅವುಗಳ ಮಾಹಿತಿಯನ್ನು ನೀಡಬೇಕಾಗುತ್ತದೆ. ತನಿಖೆ ಪ್ರಗತಿಯಲ್ಲಿರುವ ಪ್ರಕರಣಗಳ ಕುರಿತು ಅಂತಿಮ ವರದಿ ಸಲ್ಲಿಕೆಯಾಗದ ಹೊರತು ಯಾವುದೇ ಮಾಹಿತಿ ನೀಡಲು ಅನುಮತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾರ್ಗದರ್ಶನ ಹಾಗೂ ಪ್ರೋತ್ಸಾಹಕ್ಕೆ ಸೂಚನೆ:
ಮಾಹಿತಿ ಹಕ್ಕು ಕಾಯ್ದೆಯು ಹಿಂದಿನ 20 ವರ್ಷಗಳ ಮಾಹಿತಿಗೂ ಅನ್ವಯವಾಗುತ್ತದೆ. ಕಾಯ್ದೆಯ ಅಳವಡಿಕೆಗೆ ಸುಪ್ರೀಂ ಮತ್ತು ಹೈಕೋರ್ಟ್ಗಳ ಆದೇಶಗಳು ಸಾಕಷ್ಟು ಬಲ ತುಂಬಿವೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಆರ್ಟಿಐ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. “ರಾಜ್ಯಮಟ್ಟದ ಆರ್ಟಿಐ ದಿನಾಚರಣೆ ಸಂದರ್ಭದಲ್ಲಿ ‘ಶೂನ್ಯ ಪ್ರಕರಣ’ ಹೊಂದಿರುವ ಜಿಲ್ಲೆಗೆ ಗೌರವ ನೀಡಲಾಗುತ್ತದೆ. ಅದರಂತೆ ಜಿಲ್ಲೆಯಲ್ಲೂ ಯಾವುದೇ ಅರ್ಜಿ ಬಾಕಿ ಹೊಂದಿರದ ಅಧಿಕಾರಿಗಳನ್ನು ‘ಉತ್ತಮ ಪಿಐಒ’ ಎಂದು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಬೇಕು” ಎಂದು ಮುಖ್ಯ ಮಾಹಿತಿ ಆಯುಕ್ತರು ಸಲಹೆ ನೀಡಿದರು.
ಅಧಿಕಾರಿಗಳ ಸ್ಪಂದನೆ:
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, “ಆರು ತಿಂಗಳಿಗೊಮ್ಮೆ ಪಿಐಒಗಳಿಗೆ, ಪ್ರಥಮ ಮತ್ತು ದ್ವಿತೀಯ ಮೇಲ್ಮನವಿ ಪ್ರಾಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬಾಕಿ ಇರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲಾಗುತ್ತದೆ. ಆರ್ಟಿಐ ಕಾಯ್ದೆ ಆಡಳಿತದಲ್ಲಿ ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಮೂಡಿಸುತ್ತದೆ” ಎಂದರು.
ಪೊಲೀಸ್ ಇಲಾಖೆಯ ಪಾತ್ರ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳು, ವೈಯಕ್ತಿಕ ಮಾಹಿತಿ, ಸಿಸಿಟಿವಿ ದೃಶ್ಯಗಳು ಮತ್ತು ಪ್ರಕರಣಗಳ ಪ್ರಗತಿ ಬಗ್ಗೆ ಮಾಹಿತಿ ನೀಡುವಾಗ ಕಾಯ್ದೆಯ ಅವಕಾಶಗಳು ಮತ್ತು ಸೆಕ್ಷನ್ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜಾಣತನದಿಂದ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ಯಾವ ಮಾಹಿತಿಯನ್ನು ನೀಡಬೇಕು ಮತ್ತು ಯಾವುದನ್ನು ನಿರಾಕರಿಸಬೇಕು ಎಂಬ ಬಗ್ಗೆ ಪಿಐಒಗಳಿಗೆ ತಿಳುವಳಿಕೆ ಇರಬೇಕು. ಸಿಇಒ ಭುವನೇಶ ಪಾಟೀಲ ಅವರು, ಮಾಹಿತಿ ನೀಡುವಾಗ ಅಥವಾ ನಿರಾಕರಿಸುವಾಗ ಕಾಯ್ದೆಯ ಸೆಕ್ಷನ್ಗಳನ್ನು ಉಲ್ಲೇಖಿಸುವುದು ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಹಾನಿಂಗ್ ನಂದಗಾಂವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಪಿಐಒಗಳು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸ್ವಾಗತಿಸಿ, ವಂದಿಸಿದರು.

