
ಕಾರವಾರ: ದಾಖಲೆ ಇಲ್ಲದೆ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಬರೋಬ್ಬರಿ ₹1,99,99,500 ನಗದನ್ನು ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ನಸುಕಿನ ಜಾವ ಚಿತ್ತಾಕುಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಣಜಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಈ ಬೃಹತ್ ಮೊತ್ತದ ಹಣ ಪತ್ತೆಯಾಗಿದೆ. ರಾಜಸ್ಥಾನ ಮೂಲದ ಕಲ್ವೇಶ್ ಮತ್ತು ಭಮ್ರುಕುಮಾರ ಎಂಬುವವರು ಈ ಹಣವನ್ನು ಸಾಗಿಸುತ್ತಿದ್ದರು ಎಂದು ಚಿತ್ತಾಕುಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಗಿಸಲಾಗುತ್ತಿದ್ದ ನೋಟಿನ ರಾಶಿಗಳನ್ನು ಎರಡು ಬ್ಯಾಗ್‌ಗಳಲ್ಲಿ ತುಂಬಿಸಿಡಲಾಗಿತ್ತು. ಆರೋಪಿಗಳು ಈ ಹಣವನ್ನು ತಮಿಳುನಾಡಿನ ಹೊಸೂರಿಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

