
ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರೆದ “ನೀರಿನ ಹೆಜ್ಜೆ: ವಿವಾದ–ಒಪ್ಪಂದ–ತೀರ್ಪು” ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ನೀರಿನ ಹಕ್ಕು, ಜಲ ವಿವಾದಗಳು ಮತ್ತು ಕೇಂದ್ರದ ಅನ್ಯಾಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ಒಂದೇ ದಿನ ಕೂಡ ಧ್ವನಿಮಾಡುತ್ತಿಲ್ಲ ಎಂದು ಆರೋಪಿಸಿದರು. “ಪ್ರಹ್ಲಾದ್ ಜೋಶಿ ಕೂಡ ಕೇಂದ್ರದಲ್ಲಿ ರಾಜ್ಯದ ಪರವಾಗಿ ಬಾಯಿ ಬಿಟ್ಟಿರುವುದೇ ಇಲ್ಲ. ಮಹದಾಯಿ, ಕೃಷ್ಣಾ, ಕಾವೇರಿ—ಇವುಗಳ ಕುರಿತು ನ್ಯಾಯಬದ್ಧ ತೀರ್ಮಾನಗಳು ಇನ್ನೂ ರಾಜ್ಯಕ್ಕೆ ಲಭಿಸಬೇಕಿದೆ,” ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರ ಪುಸ್ತಕದಲ್ಲಿ ಜಲಸಂಪನ್ಮೂಲ ಸಚಿವರಾಗಿ ಪಡೆದ ಅನುಭವ, ಗ್ರಹಿಕೆ ಮತ್ತು ನೀರಿನ ಮಹತ್ವವನ್ನು ವಿವರಿಸಿರುವುದಾಗಿ ತಿಳಿಸಿದ ಸಿಎಂ, “ಪುಸ್ತಕವನ್ನು ಸಂಪೂರ್ಣ ಓದುತ್ತೇನೆ. ರಾಜ್ಯದ ಜನರಿಗೆ ನದಿ ವಿವಾದಗಳ ಆಳ–ಅಗಲ ತಿಳಿಸುವ ಕೆಲಸ ಈ ಕೃತಿಯದು,” ಎಂದರು. ಜೊತೆಗೆ, “2028ರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಮುಂದುವರೆದು, ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡಿ, “67 ಟಿಎಂಸಿ ನೀರನ್ನು ಸಂಗ್ರಹಿಸುವ ಈ ಯೋಜನೆ ತಮಿಳುನಾಡಿಗೂ ಹೆಚ್ಚು ಅನುಕೂಲಕರ. ಅದರೂ ಅವರು ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಇದಕ್ಕೆ ನಾವು ಪಾದಯಾತ್ರೆ ನಡೆಸಿದ್ದೇವೆ. ಟೀಕೆ ಬಂದರೂ ಹೆದರಾಗದೆ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದ್ದೇವೆ” ಎಂದು ಸ್ಮರಿಸಿದರು.
ಕೃಷ್ಣಾ ನೀರಿನ ವಿವಾದದ ಕುರಿತಾಗಿ ಕೇಂದ್ರ ಸರ್ಕಾರ ಗಜೆಟ್ ನೋಟಿಫಿಕೇಶನ್ ಪ್ರಕಟಿಸದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಸಿಎಂ, “ಬಿಜೆಪಿ–ಜೆಡಿಎಸ್ ಪಕ್ಷಗಳು ಹಾಗೂ ಅವರ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ, ಕೇಂದ್ರದ ಆರ್ಥಿಕ ದ್ರೋಹದ ಬಗ್ಗೆಯೂ ಬಾಯಿ ಬಿಟ್ಟಿಲ್ಲ” ಎಂದು ಕಿಡಿಕಾರಿದರು. ಕಬ್ಬು ಬೆಳೆಗಾರರ ಹಿತಕ್ಕೆ ಕೇಂದ್ರ ಸರ್ಕಾರವೇ ದ್ರೋಹ ಮಾಡಿದೆ ಎಂದು ಹೇಳಿದರು.
ಮುಧೋಳದಲ್ಲಿ ಕಬ್ಬು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಲ್ಲೇಖಿಸಿದ ಸಿಎಂ, “ರೈತರು ಹಾಗೂ ರೈತ ಮುಖಂಡರು ನಾವು ಬೆಂಕಿ ಹಚ್ಚಿಲ್ಲ ಎಂದು ಹೇಳಿದ್ದಾರೆ. ಯಾರು ಬೆಂಕಿಹಚ್ಚಿದ್ದಾರೆ ಎಂಬುದರ ಕುರಿತು ತನಿಖೆಗೆ ಸೂಚಿಸಲಾಗಿದೆ. ಸತ್ಯಾಂಶ ಹೊರತೆಗೆದಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು

