ಎರಡು ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲು: ತಂದೆಯಿಂದಲೇ ಮಗನ ಹತ್ಯೆ

Spread the love

ಹಾಸನ: ಎರಡು ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲು: ತಂದೆಯಿಂದಲೇ ಮಗನ ಹತ್ಯೆ

ಹಾಸನ: ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ಸಂತೆ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಒಂದು ಕೊಲೆ ಪ್ರಕರಣ, ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ. ತಂದೆಯೇ ತನ್ನ ಮಗನನ್ನು ಕೊಲೆ ಮಾಡಿ, ಮನೆಯ ಹಿಂಭಾಗದಲ್ಲಿರುವ ಇಂಗುಗುಂಡಿಯಲ್ಲಿ ಹೂತುಹಾಕಿದ್ದ ಸಂಗತಿ ಈಗ ಬಹಿರಂಗಗೊಂಡಿದ್ದು, ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆಯ ವಿವರಗಳು:
ಕೊಲೆಯಾದ ವ್ಯಕ್ತಿಯನ್ನು 32 ವರ್ಷದ ರಘು ಎಂದು ಗುರುತಿಸಲಾಗಿದೆ. ಆರೋಪಿ ಮತ್ತು ರಘು ಅವರ ತಂದೆಯಾಗಿದ್ದ ಗಂಗಾಧರ (53) ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗಂಗಾಧರನ ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ರಘು ಕಾಣಿಸಿಕೊಳ್ಳದಿದ್ದರಿಂದ ಕುಟುಂಬದ ಸದಸ್ಯರಲ್ಲಿ ಅನುಮಾನ ಹುಟ್ಟಿಕೊಂಡಿದೆ. ಇದೇ ವೇಳೆ, ಬುದ್ಧಿಮಾಂದ್ಯತೆಯ ಸಮಸ್ಯೆಗಳಿಂದ ಬಳಲುತ್ತಿದ್ದ ಗಂಗಾಧರನ ಕಿರಿಯ ಮಗ ರೂಪೇಶ್, ಅಣ್ಣನ ಕೊಲೆಯ ರಹಸ್ಯವನ್ನು ಕುಟುಂಬಸ್ಥರ ಎದುರು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲೆಯ ಹಿನ್ನೆಲೆ:
ಕಳೆದ ಎರಡು ವರ್ಷಗಳ ಹಿಂದೆ ಗಂಗಾಧರ ಮತ್ತು ರಘು ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಈ ವೇಳೆ, ಗಂಗಾಧರನ ಕೈಯಿಂದ ರಘು ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ರಘು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ, ಜೂಜಿನ ಚಟಕ್ಕೆ ಬಿದ್ದಿದ್ದರಿಂದ ಪದೇಪದೇ ಗ್ರಾಮಕ್ಕೆ ಬಂದು ತನ್ನ ತಂದೆಯಿಂದ ಹಣಕ್ಕಾಗಿ ಒತ್ತಾಯಿಸುತ್ತಿದ್ದನು ಎಂದು ತಿಳಿದುಬಂದಿದೆ. ಘಟನೆ ನಡೆದ ನಂತರ, ಗಂಗಾಧರನು ರೂಪೇಶ್ ಎದುರಿನಲ್ಲಿಯೇ ರಘುವಿನ ದೇಹವನ್ನು ಇಂಗುಗುಂಡಿಯಲ್ಲಿ ಹೂತುಹಾಕಿದ್ದನು.
ಪೊಲೀಸ್ ಕಾರ್ಯಾಚರಣೆ:
ರಘುವಿನ ಸೋದರಮಾವ ಪಾಲಾಕ್ಷ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪ್ರಕರಣದ ತನಿಖೆ ಆರಂಭವಾಯಿತು.
‌‌‌‌‌‌ ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ಹಾಗೂ ಹಾಸನ ಡಿವೈಎಸ್‌ಪಿ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ಆಲೂರು ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ರೆಡ್ಡಿ ಮತ್ತು ಎಎಸ್‌ಐ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಜೆಸಿಬಿ ಯಂತ್ರದ ಸಹಾಯದಿಂದ ಇಂಗುಗುಂಡಿಯನ್ನು ಅಗೆದಾಗ, ರಘುವಿನ ಮೃತದೇಹದ ಅವಶೇಷಗಳು ಪತ್ತೆಯಾದವು. ಮೃತದೇಹದ ಅವಶೇಷಗಳನ್ನು ಹೆಚ್ಚಿನ ವಿಧಿವಿಧಾನಗಳಿಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಕಾರ್ಯಾಚರಣೆಯನ್ನು ವೀಕ್ಷಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ರೀತಿಯ ಘಟನೆ ತಮ್ಮ ಗ್ರಾಮದಲ್ಲಿ ನಡೆದಿರುವುದು ಎಲ್ಲರಲ್ಲಿ ಆಘಾತ ಮತ್ತು ಆತಂಕ ಮೂಡಿಸಿದೆ ಎಂದು ಗುನಿಗಿದರು.
ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ರಮೇಶ್, ರಾಜಸ್ವ ನಿರೀಕ್ಷಕ ಸಂತೋಷ್, ಎಎಸ್‌ಐ ಅನಂತ್, ದೇವರಾಜು, ಸಂಗಮ್, ಪುನೀತ್, ಪೂರ್ಣೇಂದ್ರ, ಫಾರೂಕ್, ನಂದೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *