​ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 23 ದಿನಕ್ಕೆ 2.34 ಕೋಟಿ ಸಂಗ್ರಹ

Spread the love

ಹನೂರು: ತಾಲ್ಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯವು ಗುರುವಾರ ನಡೆದಿದ್ದು, ಕೇವಲ 23 ದಿನಗಳ ಅವಧಿಯಲ್ಲಿ ಬರೋಬ್ಬರಿ 2.34 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

​ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಹಾಗೂ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರ ನೇತೃತ್ವದಲ್ಲಿ ನಡೆದ ಎಣಿಕೆಯಲ್ಲಿ ಒಟ್ಟು 2,33,84,201 ರೂಪಾಯಿ ನಗದು ಸಂಗ್ರಹವಾಗಿದೆ. ಇದರಲ್ಲಿ ಭಕ್ತರು ಇ-ಹುಂಡಿ ಮೂಲಕ ಸಲ್ಲಿಸಿದ ಕಾಣಿಕೆಯೂ ಸೇರಿದೆ. ನಗದಿನ ಜೊತೆಗೆ 21 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ ಹಾಗೂ 4 ವಿದೇಶಿ ಕರೆನ್ಸಿ ನೋಟುಗಳು ಲಭ್ಯವಾಗಿವೆ. ವಿಶೇಷವೆಂದರೆ, ಚಲಾವಣೆಯಿಂದ ಹೊರಗಿರುವ 2000 ರೂಪಾಯಿ ಮುಖಬೆಲೆಯ ಮೂರು ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.

​ಯುಗಾದಿ ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ ಹಾಗೂ ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಅದರಲ್ಲೂ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯವಿರುವುದರಿಂದ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಈ ಭಾರಿ ಮೊತ್ತದ ಕಾಣಿಕೆ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

​ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮೆರಾಗಳ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು. ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಹಾಗೂ ಪ್ರಾಧಿಕಾರದ ನೌಕರರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಲೆಕ್ಕಪತ್ರ ಸಲಹೆಗಾರ ಮಹದೇವು, ಜಿಲ್ಲಾಡಳಿತ ಕಚೇರಿಯ ಮಹೇಶ್ ಚಂದ್ರ, ಪ್ರಾಧಿಕಾರದ ಸದಸ್ಯ ಮರಿಸ್ವಾಮಿ ಕಾಗಲವಾಡಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು

ವರದಿ: ಕಾರ್ತಿಕ ಗೌಡ ಹನೂರ

Leave a Reply

Your email address will not be published. Required fields are marked *